ಬೆಂಗಳೂರು: ದೇಶದ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್ ಮತ್ತು ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಸಂಸ್ಥೆ ಬಜಾಜ್ ಫೈನಾನ್ಸ್, ಗ್ರಾಹಕರಿಗೆ ಹಣಕಾಸಿನ ಸೇವೆ ಒದಗಿಸುವ ನಿಟ್ಟಿನಲ್ಲಿ ಅತಿದೊಡ್ಡ ಡಿಜಿಟಲ್ ವೇದಿಕೆ ರಚಿಸಲು ಪಾಲುದಾರಿಕೆಯನ್ನು ಪ್ರಕಟಿಸಿವೆ.
ಈ ಪಾಲುದಾರಿಕೆಯು ಏರ್‌ಟೆಲ್‌ನ 375 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರು ಹಾಗೂ 12 ಲಕ್ಷಕ್ಕಿಂತ ಹೆಚ್ಚಿನ ಬಲಿಷ್ಠ ವಿತರಣೆ ಜಾಲದೊಟ್ಟಿಗೆ ಬಜಾಜ್ ಫೈನಾನ್ಸ್‌ನ 24 ಸೇವೆಗಳನ್ನು ಜೋಡಿಸುತ್ತದೆ.
ಪ್ರಸ್ತುತ ಬಜಾಜ್ ಫೈನಾನ್ಸ್‌ನ ಎರಡು ಸೌಲಭ್ಯವು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ ಲಭ್ಯವಿವೆ. ಮಾರ್ಚ್ ವೇಳೆಗೆ ಮತ್ತೆ ನಾಲ್ಕು ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಚಿನ್ನದ ಸಾಲ, ವ್ಯವಹಾರ ಸಾಲ, ಸಹ-ಬ್ರ್ಯಾಂಡ್ ಇನ್‌ಸ್ಟಾ ಕಾರ್ಡ್ ಮತ್ತು ವೈಯಕ್ತಿಕ ಸಾಲ ನೀಡಲು ನಿರ್ಧರಿಸಲಾಗಿದೆ ಎಂದು ಕಂಪನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಪ್ರಸಕ್ತ ವರ್ಷದಲ್ಲಿ ಬಜಾಜ್ ಫಿನ್‌ಸರ್ವ್‌ನ ಸುಮಾರು 10 ಹಣಕಾಸಿನ ಸೇವೆಗಳನ್ನು ಪರಿಚಯಿಸಲು ಏರ್‌ಟೆಲ್ ಸಜ್ಜಾಗಿದೆ. ಏರ್‌ಟೆಲ್‌ನ ಗ್ರಾಹಕರು ಮೊದಲು ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಮತ್ತು ನಂತರ ತನ್ನ ರಾಷ್ಟ್ರ ವ್ಯಾಪಿ ಇರುವ ಮಳಿಗೆಗಳ ಮೂಲಕ ಏರ್‌ಟೆಲ್ ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಇಎಂಐ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕಾರ್ಡ್ ಮೂಲಕ ಬಜಾಜ್ ಫಿನ್‌ಸರ್ವ್ ಗ್ರಾಹಕರಿಗೆ ಲಭ್ಯವಿರುವ ಕೊಡುಗೆಗಳನ್ನು ಪಡೆಯಬಹುದು. ಎಲೆಕ್ಟ್ರಾನಿಕ್ಸ್, ಫರ್ನಿಚರ್ ಮತ್ತು ದಿನಸಿ ಸಾಮಗ್ರಿ ಒಳಗೊಂಡಂತೆ 1.5 ಲಕ್ಷಕ್ಕೂ ಹೆಚ್ಚಿನ ಪಾಲುದಾರಿಕೆ ಹೊಂದಿರುವ ಅಂಗಡಿಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಗರಗಳಾದ್ಯಂತ ಅನೇಕ ಸರಕುಗಳನ್ನು ಖರೀದಿಸಲು ಅನುಕೂಲವಾಗಲಿದೆ.
ಇಎಂಐ ಆಯ್ಕೆ ಮತ್ತು ಪಾವತಿ ಯೋಜನೆಗಳಿಂದ ಏರ್‌ಟೆಲ್ ಬಳಕೆದಾರರಿಗೆ ಸಹಾಯವಾಗಲಿದೆ. ಹೆಚ್ಚುವರಿಯಾಗಿ ಈ ಸಹ-ಬ್ರ್ಯಾಂಡ್‌ನ ಕಾರ್ಡ್ ಇ-ಕಾಮರ್ಸ್ ವಹಿವಾಟುಗಳಿಗೂ ಬಳಸಬಹುದಾಗಿದೆ ಎಂದು ತಿಳಿಸಿವೆ.
‘ಗ್ರಾಹಕರ ಎಲ್ಲಾ ಹಣಕಾಸಿನ ಅಗತ್ಯತೆಗಳಿಗಾಗಿ ಏರ್‌ಟೆಲ್ ಫೈನಾನ್ಸ್ ಅನ್ನು ಏಕೈಕ ಸ್ಥಳವನ್ನಾಗಿಸುವ ಕನಸು ಹೊಂದಿದ್ದೇವೆ’ ಎಂದು ಭಾರ್ತಿ ಏರ್‌ಟೆಲ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಹೇಳಿದ್ದಾರೆ.
‘ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಹಣಕಾಸಿನ ಸೇವೆ ಪಡೆಯಲು ಬಯಸುವ ಅನೇಕ ಜನರಿಗೆ ಇದು ಸಹಾಯಕವಾಗಲಿದೆ’ ಎಂದು ಬಜಾಜ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.