ADVERTISEMENT

ವಿದೇಶಿ ಮದ್ಯ ಮಾರಾಟ: ಮೊದಲ ಸ್ಥಾನದಲ್ಲಿ ಕರ್ನಾಟಕ

‘ಸರ್ಕಾರದ ನೀತಿಗಳಿಂದಾಗಿ ಅಲ್ಪಾವಧಿ, ಮಧ್ಯಮಾವಧಿಯಲ್ಲಿ ಪರಿಣಾಮ’

ಪಿಟಿಐ
Published 28 ಸೆಪ್ಟೆಂಬರ್ 2025, 15:55 IST
Last Updated 28 ಸೆಪ್ಟೆಂಬರ್ 2025, 15:55 IST
Close-up. Male Pouring Dominican rum from bottle into glass.
Adult, Adults Only, Alcohol - Drink, Alcohol Abuse, Bottle
Close-up. Male Pouring Dominican rum from bottle into glass. Adult, Adults Only, Alcohol - Drink, Alcohol Abuse, Bottle   

ನವದೆಹಲಿ: ದೇಶದಲ್ಲಿ ತಯಾರಾದ ವಿದೇಶಿ ಮದ್ಯದ (ಐಎಂಎಫ್‌ಎಲ್‌) ಮಾರಾಟದಲ್ಲಿ ದಕ್ಷಿಣದ ರಾಜ್ಯಗಳು ಹೆಚ್ಚಿನ ಪಾಲು ಹೊಂದಿವೆ. ಅದರಲ್ಲೂ ಮುಖ್ಯವಾಗಿ ಐಎಂಎಫ್‌ಎಲ್‌ ಮಾರಾಟದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಶೇಕಡ 17ರಷ್ಟು ಪಾಲು ಹೊಂದಿದೆ.

ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಕ್ಷಿಣದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಹೊಂದಿದ್ದ ಒಟ್ಟು ಪಾಲು ಶೇ 58ರಷ್ಟು ಆಗಿತ್ತು.

ದೇಶದ ಇತರ ಕಡೆಗಳಲ್ಲಿ ಆಗಿರುವ ಮಾರಾಟದ ಪ್ರಮಾಣವು ಒಟ್ಟು ಮಾರಾಟದಲ್ಲಿ ಶೇ 42ರಷ್ಟು ಇದೆ ಎಂದು ಭಾರತೀಯ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟ (ಸಿಐಎಬಿಸಿ) ನೀಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ADVERTISEMENT

2024-25ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿನ ಅಬಕಾರಿ ನೀತಿಗಳ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗಿರಲಿಲ್ಲ. ಇದರಿಂದಾಗಿ ಇಡೀ ವರ್ಷದ ಒಟ್ಟು ಮಾರಾಟ ಕೂಡ ಕಡಿಮೆ ಆಗಿದೆ ಎಂದು ಸಿಐಎಬಿಸಿ ಮಹಾನಿರ್ದೇಶಕ ಅನಂತ ಎಸ್. ಅಯ್ಯರ್ ಹೇಳಿದ್ದಾರೆ.

‘ರಾಜ್ಯಗಳು ವಿಧಿಸುವ ಸುಂಕ ಪ್ರತಿ ವರ್ಷವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಬಕಾರಿ ನೀತಿಗಳೂ ಬದಲಾಗುತ್ತವೆ. ಇವು ಅಲ್ಪಾವಧಿ ಹಾಗೂ ಮಧ್ಯಮಾವಧಿಯಲ್ಲಿ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರುತ್ತವೆ’ ಎಂದು ಅಯ್ಯರ್ ಹೇಳಿದ್ದಾರೆ.

ವಿಸ್ಕಿ, ವೊಡ್ಕಾ, ರಮ್, ಜಿನ್ ಮತ್ತು ಬ್ರ್ಯಾಂಡಿಯನ್ನು ಐಎಂಎಫ್‌ಎಲ್‌ ಹೆಸರಿನಿಂದ ಗುರುತಿಸಲಾಗುತ್ತದೆ.

ಕರ್ನಾಟಕದಲ್ಲಿ 2024–25ರಲ್ಲಿ ಒಟ್ಟು 6.88 ಕೋಟಿ ಕೇಸ್‌ ಐಎಂಎಫ್‌ಎಲ್‌ ಮಾರಾಟವಾಗಿದೆ. ಕರ್ನಾಟಕದ ನಂತರದ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 6.47 ಕೋಟಿ ಕೇಸ್‌ಗಳಷ್ಟು ಐಎಂಎಫ್‌ಎಲ್‌ ಮಾರಾಟ ಆಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು 2.5 ಕೋಟಿ ಕೇಸ್‌ಗಳಷ್ಟು ಐಎಂಎಫ್‌ಎಲ್‌ ಮಾರಾಟ ಆಗಿದೆ.

‘ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿದೆ. ದೆಹಲಿ ಕೂಡ ಪ್ರಮುಖ ಮಾರುಕಟ್ಟೆ. ಅಲ್ಲಿ ಮಾರಾಟ ಹೆಚ್ಚಳ ಕಾಣುವುದಕ್ಕೆ ಹೊಸ ಅಬಕಾರಿ ನೀತಿಗಾಗಿ ಕಾಯುತ್ತಿದ್ದೇವೆ’ ಎಂದು ಅಯ್ಯರ್ ಹೇಳಿದ್ದಾರೆ.

ಪ್ರೀಮಿಯಂ ವಿಸ್ಕಿಗೆ ಬೇಡಿಕೆ

ಮದ್ಯ ಉದ್ಯಮದಲ್ಲಿನ ಈಚೆಗಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅನಂತ ಅಯ್ಯರ್ ‘ಪ್ರೀಮಿಯಂ ಮತ್ತು ಐಷಾರಾಮಿ ವರ್ಗದ ಪೇಯಗಳ ಅದರಲ್ಲೂ ಮುಖ್ಯವಾಗಿ ವಿಸ್ಕಿಗಳ ಮಾರಾಟ ಈಚಿನ ವರ್ಷಗಳಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ’ ಎಂದು ಹೇಳಿದ್ದಾರೆ. ‘ಬಹಳಷ್ಟು ಕಂಪನಿಗಳು ಪ್ರೀಮಿಯಂ ವಿಸ್ಕಿ ರಮ್‌ ವೊಡ್ಕಾಗಳ ಕಡೆ ಮುಖ ಮಾಡಿವೆ. ಪ್ರೀಮಿಯಂ ಬ್ರ್ಯಾಂಡ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುವುದು ಮುಂದೆಯೂ ಇರಲಿದೆ. ಈ ವರ್ಗದಲ್ಲಿ ಹೊಸತನ ಇರಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.