ADVERTISEMENT

ಸಾವಿತ್ರಮ್ಮನ ಆಲೆಮನೆ ಸಾಹಸ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 19:45 IST
Last Updated 23 ಅಕ್ಟೋಬರ್ 2018, 19:45 IST
ಆಲೆಮನೆಯಲ್ಲಿ ಬೆಲ್ಲ ಪ್ಯಾಕ್‌ ಮಾಡುತ್ತಿರುವ ಸಾವಿತ್ರಮ್ಮ        ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ
ಆಲೆಮನೆಯಲ್ಲಿ ಬೆಲ್ಲ ಪ್ಯಾಕ್‌ ಮಾಡುತ್ತಿರುವ ಸಾವಿತ್ರಮ್ಮ ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ   

ಒಬ್ಬಂಟಿಯಾಗಿ ನಾಲ್ಕು ಕೊಪ್ಪರಿಕೆಗಳ ಬೃಹತ್‌ ಆಲೆಮನೆ ನಡೆಸುತ್ತಿರುವ ಈ ಮಹಿಳೆ 10 ಕುಟುಂಬಗಳಿಗೆ ಉದ್ಯೋಗ ಕೊಟ್ಟಿದ್ದಾರೆ. ಆಲೆಮನೆಗೆ ಉದ್ಯಮ ರೂಪ ಕೊಟ್ಟಿರುವ ಅವರು ದಿನಕ್ಕೆ 15 ಟನ್‌ ಕಬ್ಬು ಅರೆಯುತ್ತಾರೆ. ಅಚ್ಚುಬೆಲ್ಲ ತಯಾರಿಸಿ ಅಂಗಡಿ, ಎಪಿಎಂಸಿ, ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುತ್ತಾರೆ.

ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ಸಾವಿತ್ರಮ್ಮ ಅವರ ಆಲೆಮನೆ ಶುದ್ಧ ಬೆಲ್ಲಕ್ಕೆ ಹೆಸರುವಾಸಿ. ಮಂಡ್ಯ, ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಂದ ಕಬ್ಬು ಖರೀದಿಸಿ ತರುವ ಅವರು ಅಚ್ಚು ಬೆಲ್ಲ ತಯಾರಿಸುತ್ತಾರೆ.

365 ದಿನಗಳೂ ಅವರ ಆಲೆಮನೆ ನಡೆಯುತ್ತದೆ. ಅತ್ಯಾಧುನಿಕ ವಿದ್ಯುತ್‌ಚಾಲಿತ ಕಬ್ಬು ಕ್ರಷರ್‌ನಿಂದ ಕಬ್ಬು ಅರೆದು ದಿನಕ್ಕೆ 10 ಕ್ವಿಂಟಲ್‌ ಬೆಲ್ಲ ತಯಾರಿಸುತ್ತಾರೆ. ರೈತರಿಗೆ ಉತ್ತಮ ಬೆಲೆ ನೀಡಿ, ಸ್ಥಳದಲ್ಲೇ ಹಣ ಕೊಡುವ ಅವರು ಈ ಭಾಗದಲ್ಲಿ ಅತ್ಯಂತ ನಂಬಿಕಸ್ಥ ಕಬ್ಬು ಕ್ರಷರ್‌ ಮಾಲೀಕರಾಗಿದ್ದಾರೆ.

ADVERTISEMENT

ತಮಿಳುನಾಡಿನ 7 ಕುಟುಂಬಗಳು ಗದ್ದೆಯಲ್ಲಿ ಕಬ್ಬು ಕಡಿದರೆ, ಮೂರು ಕುಟುಂಬಗಳು ಆಲೆಮನೆಯಲ್ಲಿ ಬೆಲ್ಲ ತೆಗೆಯುತ್ತವೆ. ಸ್ಥಳದಲ್ಲೇ ಬೆಲ್ಲದ ಅಚ್ಚುಗಳನ್ನು ಪ್ಯಾಕ್‌ ಮಾಡಿ ಅದಕ್ಕೆ ‘ಎ1 ಬೆಲ್ಲ’ ಎಂಬ ಬ್ರ್ಯಾಂಡ್‌ ರೂಪ ಕೊಟ್ಟಿದ್ದಾರೆ. ಅಂಗಡಿ ಮಾಲೀಕರು, ಗ್ರಾಹಕರು ಆಲೆಮನೆಗೆ ಬಂದು ಬೆಲ್ಲ ಕೊಳ್ಳುತ್ತಾರೆ. ಪಡಿತರ ವಿತರಣೆಗಾಗಿಯೂ ಈ ಬೆಲ್ಲ ಪೂರೈಸುತ್ತಾರೆ. ಮಂಡ್ಯ, ಮೈಸೂರು ಎಪಿಎಂಸಿಯಲ್ಲೂ ಬೆಲ್ಲ ಮಾರಾಟ ಮಾಡುತ್ತಾರೆ.

ಕಾರ್ಮಿಕರ ಜೊತೆ ಸಾವಿತ್ರಮ್ಮ

ಪತಿಯ ಹೆಸರು ಉಳಿಸಿದರು: ಸಾವಿತ್ರಮ್ಮ ಅವರಿಗೆ ಆಲೆಮನೆಯ ಗಂಧಗಾಳಿಯೂ ಇರಲಿಲ್ಲ. ರೇಷ್ಮೆ ಕೃಷಿ ಮಾಡುತ್ತಿದ್ದ ಅವರು ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದರು. ಪತಿ ಚೌಡಯ್ಯ 10 ವರ್ಷಗಳ ಹಿಂದೆ ಮೃತಪಟ್ಟರು. ಪತಿ ಮೃತಪಟ್ಟ ನಂತರ ಆಲೆಮನೆ ಕೊಳ್ಳಲು ಮುಂದೆ ಬಂದವರಿಗೆ ಲೆಕ್ಕವಿರಲಿಲ್ಲ. ಆದರೆ, ಯಾರ ಕೈಗೂ ಕೊಡದೆ ತಾವೇ ಮುನ್ನಡೆಸಿದರು. ಜೊತೆಗೆ ಎಮ್ಮೆ, ಹಸು ಕಟ್ಟಿ ಹೈನುಗಾರಿಕೆಯನ್ನೂ ಆರಂಭಿಸಿದರು.

ಆದರೆ, ಸಾವಿತ್ರಮ್ಮ ಹಲವು ಸವಾಲು ಎದುರಿಸಬೇಕಾಯಿತು. ಕಿಡಿಗೇಡಿಗಳು ಆಲೆಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಇಟ್ಟರು. ನೋಡನೋಡುತ್ತಲೇ ಬದುಕಿನ ಆಧಾರ ಬೆಂಕಿಗೆ ಆಹುತಿಯಾಯತು. ಆದರೂ ಜಗ್ಗದ ಸಾವಿತ್ರಮ್ಮ ಮತ್ತೊಮ್ಮೆ ಬದುಕು ಕಟ್ಟಿಕೊಂಡರು. ‘ಪತಿ ತೀರಿಕೊಂಡ ಮೇಲೆ ಅವರ ಹೆಸರು ಉಳಿಸಲು ಆಲೆಮನೆ ನಡೆಸುವ ನಿರ್ಧಾರ ಕೈಗೊಂಡೆ. ಪತಿ ಬರೆದಿಟ್ಟಿದ್ದ ಲೆಕ್ಕಪುಸ್ತಕಗಳು ನನ್ನ ಸಹಾಯಕ್ಕೆ ಬಂದವು. ನಾನು ಎಸ್‌ಎಸ್‌ಎಲ್‌ಸಿ ಓದಿದ್ದು ಸಾರ್ಥಕ ಎನಿಸಿತು’ ಎನ್ನುತ್ತಾರೆ ಸಾವಿತ್ರಮ್ಮ.

ಮಗನಿಗೆ ಐಎಎಸ್‌ ಕನಸು

ಆಲೆಮನೆ ನಡೆಸುತ್ತಲೇ ಸಾವಿತ್ರಮ್ಮ ತಮ್ಮಿಬ್ಬರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಮಗ ಬಿ.ಸಿ.ಕಿರಣ್‌ ಕುಮಾರ್‌ ಎಂ.ಟೆಕ್‌ ಮುಗಿಸಿ ಹೈದರಾಬಾದ್‌ನ ‘ಆರ್‌.ಸಿ. ರೆಡ್ಡಿ ಐಎಎಸ್‌ ಅಕಾಡೆಮಿ’ಯಲ್ಲಿ ನಾಗರಿಕ ಸೇವಾ ಪರೀಕ್ಷೆಯ ತರಬೇತಿ ಪಡೆದು ಅಧ್ಯಯನದಲ್ಲಿ ತೊಡಗಿದ್ದಾರೆ. ಐಟಿ ಉದ್ಯೋಗಗಳನ್ನು ತ್ಯಜಿಸಿರುವ ಕಿರಣ್‌ ಕುಮಾರ್‌ ಐಎಎಸ್‌ ಅಧಿಕಾರಿಯಾಗುವ ಕನಸಿನಲ್ಲಿದ್ದಾರೆ. ಮಗಳು ಕೀರ್ತಿಕುಮಾರಿ, ಬಿ.ಇ ಪೂರೈಸಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದಾರೆ.

‘ನನ್ನ ಒಂಟಿತನ, ಕಷ್ಟದ ಬದುಕನ್ನು ನನ್ನಿಬ್ಬರೂ ಮಕ್ಕಳ ಮೇಲೆ ಹೇರಲಿಲ್ಲ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದಿದ ಮಕ್ಕಳು ತಾವು ಇಷ್ಟಪಟ್ಟ ಪದವಿ ಪೂರೈಸಿದರು. ಮಗನನ್ನು ಐಎಎಸ್‌ ಅಧಿಕಾರಿ ಮಾಡುವುದೇ ನನ್ನ ಗುರಿ’ ಎಂದು ಸಾವಿತ್ರಮ್ಮ ಹೇಳಿದರು.

**

ಅಮ್ಮನ ಶ್ರಮ ಜೀವನವೇ ನನಗೆ ಸ್ಫೂರ್ತಿಯಾಯಿತು. ನನ್ನ ಮತ್ತು ತಂಗಿಯ ಮನಸ್ಸಿನಲ್ಲಿ ದೊಡ್ಡ ಕನಸುಗಳ ಬೀಜ ಬಿತ್ತಿದ್ದಾರೆ. ನಮ್ಮ ಪ್ರತಿ ಹೆಜ್ಜೆಯಲ್ಲೂ ಅವರ ನುಡಿಗಳು ನೆನಪಾಗುತ್ತವೆ.

–ಬಿ.ಸಿ.ಕಿರಣ್‌ ಕುಮಾರ್‌, ಎಂ.ಟೆಕ್‌ ಪದವೀಧರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.