
ನವದೆಹಲಿ: 2015ರಿಂದ 2025ರ ನಡುವೆ ಅಮೆಜಾನ್ ಕಂಪನಿಯು ಇ–ಕಾಮರ್ಸ್ ವೇದಿಕೆ ಮೂಲಕ ದೇಶದಿಂದ ಮಾಡಿರುವ ಒಟ್ಟು ರಫ್ತು ಮೌಲ್ಯವು ₹1.76 ಲಕ್ಷ ಕೋಟಿಯನ್ನು (20 ಬಿಲಿಯನ್ ಡಾಲರ್) ದಾಟಿದೆ.
ರಫ್ತು ಮೊತ್ತವನ್ನು 2030ರ ವೇಳೆಗೆ ₹7 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕಂಪನಿ ಸೋಮವಾರ ತಿಳಿಸಿದೆ.
ಅಮೆಜಾನ್ ಕಂಪನಿಯು ‘ಜಾಗತಿಕ ಮಾರಾಟ ಕಾರ್ಯಕ್ರಮ’ಕ್ಕೆ 2015ರಲ್ಲಿ ಚಾಲನೆ ನೀಡಿತ್ತು. ಕಳೆದ ದಶಕದಲ್ಲಿ ಭಾರತದಲ್ಲಿ ತಯಾರಿಸಿದ 75 ಕೋಟಿಗೂ ಹೆಚ್ಚು ಉತ್ಪನ್ನಗಳನ್ನು ವಿಶ್ವದಾದ್ಯಂತ ಗ್ರಾಹಕರಿಗೆ ಇ–ವಾಣಿಜ್ಯ ವೇದಿಕೆ ಮೂಲಕ ಮಾರಾಟ ಮಾಡಲಾಗಿದೆ.
ಒಂದೇ ವರ್ಷದಲ್ಲಿ ಅಮೆಜಾನ್‌ನಲ್ಲಿನ ರಫ್ತುದಾರರ ಪ್ರಮಾಣ ಶೇ 33ರಷ್ಟು ಹೆಚ್ಚಾಗಿದ್ದು, 2 ಲಕ್ಷಕ್ಕೆ ತಲುಪಿದೆ. ದೆಹಲಿ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಹರಿಯಾಣವು ಹೆಚ್ಚು ರಫ್ತುದಾರರನ್ನು ಹೊಂದಿರುವ ರಾಜ್ಯಗಳಾಗಿವೆ.
ಕಳೆದ ದಶಕದಲ್ಲಿ ಆರೋಗ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಮಾರಾಟದ ವಾರ್ಷಿಕ ಬೆಳವಣಿಗೆ ದರ ಶೇ 45ರಷ್ಟು ಏರಿಕೆಯಾಗಿದೆ. ಸೌಂದರ್ಯ ವರ್ಧಕಗಳು (ಶೇ 45), ಆಟಿಕೆಗಳು (ಶೇ 44), ಉಡುಪುಗಳು (ಶೇ 37ರಷ್ಟು) ಮತ್ತು ಪೀಠೋಪಕರಣಗಳ ಮಾರಾಟ (ಶೇ 36ರಷ್ಟು) ಹೆಚ್ಚಳವಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ 18 ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ತಿಳಿಸಿದೆ.
ಕರ್ನಾಟಕದಲ್ಲಿ 7 ಸಾವಿರ: 2024ರಲ್ಲಿ ‘ಅಮೆಜಾನ್‌ನ ಜಾಗತಿಕ ಮಾರಾಟ ಕಾರ್ಯಕ್ರಮ’ದ ಅಡಿ ಕರ್ನಾಟಕದ 7 ಸಾವಿರ ರಫ್ತುದಾರರು ನೋಂದಣಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.