ನವದೆಹಲಿ: ಅಮೆಜಾನ್ ಸಂಸ್ಥೆಯು ತನ್ನ ಸೇವೆಯನ್ನು ನಗರ ಪ್ರದೇಶಕ್ಕೆ ಅಲ್ಲದೇ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲು ಹಲವು ಯೋಜನೆಗಳನ್ನು ರೂಪಿಸಿಕೊಂಡಿದೆ. ಅದರ ಭಾಗವಾಗಿ ಕೇಂದ್ರ ಉದ್ಯಮ ಸಂವರ್ಧನೆ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಜೊತೆ ಒಪ್ಪಂದ ಮಾಡಿಕೊಂಡಿದೆ. ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ವೇದಿಕೆ ಕಲ್ಪಿಸಲು ಬಯಸಿದೆ.
ನವದೆಹಲಿಯ ಭಾರತ ಮಂಟಪಂ ಸಭಾಂಗಣದಲ್ಲಿ ನಡೆದ ಅಮೆಜಾನ್ ಸಂಸ್ಥೆಯ 5ನೇ ‘ಸಂಭವ್ ಸಮ್ಮಿಟ್’ ಕಾರ್ಯಕ್ರಮದಲ್ಲಿ ಡಿಪಿಐಐಟಿ ಇಲಾಖೆ ಜೊತೆ ಒಪ್ಪಂದ ಆಗಿರುವುದನ್ನು ಘೋಷಿಸಲಾಯಿತು. ದೇಶದ ಎಲ್ಲಾ ದಿಕ್ಕುಗಳಲ್ಲಿನ ಕುಗ್ರಾಮಗಳಲ್ಲಿ ವಾಸಿಸುವ ಜನರಿಗೆ ತಲುಪಲು ಸರಕು ಸಾಗಣೆ ಮತ್ತು ಹಡಗು ಸೇವೆಯನ್ನು ಆರಂಭಿಸಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಜೊತೆಗೆ ಗ್ರಾಮೀಣ ಉದ್ಯಮಗಳಿಗೆ ಲಾಭ ವೃದ್ಧಿಸುವ ಗುರಿ ಸಂಸ್ಥೆ ಹೊಂದಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿ, ‘ಅಮೆಜಾನ್ ಸಂಸ್ಥೆಯು ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಡೆಯುವ ಎಲ್ಲಾ ರೀತಿಯ ವಹಿವಾಟಿಗೆ ಮತ್ತು ಉತ್ತಮ ಕಾರ್ಯಗಳಿಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ’ ಎಂದರು.
ಅಮೆಜಾನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಮಿತ್ ಅಗರವಾಲ್ ಮಾತನಾಡಿ, ‘ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ. ವಿವಿಧ ಕ್ಷೇತ್ರಗಳಲ್ಲಿ ಮತ್ತು ಆಯಾಮಗಳಲ್ಲಿ ಮಾರುಕಟ್ಟೆ ವಿಸ್ತರಣೆ ಆಗುತ್ತಿರುವುದನ್ನು ಸದ್ಬಳಕೆ ಮಾಡಕೊಳ್ಳಲಾಗುವುದು. ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.
ಅಮೆಜಾನ್ ಸಂಸ್ಥೆಯ ರಾಷ್ಟ್ರೀಯ ವ್ಯವಸ್ಥಾಪಕ ಸಮೀರ್ ಕುಮಾರ್ ಮಾತನಾಡಿ, ‘ಡಿಜಿಟಲ್ ತಂತ್ರಜ್ಞಾನದ ಮೂಲಕ 10 ಲಕ್ಷಕ್ಕೂ ಹೆಚ್ಚು ಸಣ್ಣ ಉದ್ಯಮಗಳನ್ನು ಮಾರುಕಟ್ಟೆಯ ಮುಖ್ಯವಾಹಿನಿಗೆ ತರುತ್ತೇವೆ. ಅವರ ಉತ್ಪನ್ನಗಳಿಗೆ ಹೆಚ್ಚು ಪ್ರಚಾರ ನೀಡುವುದರ ಜೊತೆಗೆ ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ’ ಎಂದರು.
ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಡೆದ ಚರ್ಚಾಗೋಷ್ಠಿಯಲ್ಲಿ ಪತ್ರಕರ್ತ ವಿಕ್ರಮ್ ಚಂದ್ರ, ಕ್ರೀಡಾಪಟುಗಳಾದ ಸಾನಿಯಾ ಮಿರ್ಜಾ, ಯುವರಾಜ್ ಸಿಂಗ್, ರೋಹಣ ಬೋಪಣ್ಣ ಮತ್ತು ಅಭಿನವ್ ಬಿಂದ್ರಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.