ADVERTISEMENT

2018–19ನೇ ಹಣಕಾಸು ವರ್ಷ: ವಿತ್ತೀಯ ಕೊರತೆ ಹೆಚ್ಚಳ

ವರಮಾನ ಖೋತಾ

ಪಿಟಿಐ
Published 4 ಫೆಬ್ರುವರಿ 2019, 19:00 IST
Last Updated 4 ಫೆಬ್ರುವರಿ 2019, 19:00 IST
   

ನವದೆಹಲಿ: ಡಿಸೆಂಬರ್‌ ಅಂತ್ಯಕ್ಕೆ ವಿತ್ತೀಯ ಕೊರತೆಯು ₹ 7.01 ಲಕ್ಷ ಕೋಟಿಗಳಷ್ಟಾಗಿದೆ.

ಇದು, 2018–19ನೇ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ನಿಗದಿ ಮಾಡಿದ್ದ ₹ 6.24 ಲಕ್ಷ ಕೋಟಿಯ ಗುರಿಯ ಶೇ 112.4ರಷ್ಟಾಗಿದೆ.

ವರಮಾನ ಸಂಗ್ರಹ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

ADVERTISEMENT

ಸರ್ಕಾರದ ವೆಚ್ಚ ಮತ್ತು ವರಮಾನ ನಡುವಣ ವ್ಯತ್ಯಾಸವಾಗಿರುವ ವಿತ್ತೀಯ ಕೊರತೆಯು 2017ರ ಡಿಸೆಂಬರ್‌ನಲ್ಲಿ ಬಜೆಟ್‌ ಅಂದಾಜಿನ
ಶೇ 113.6ರಷ್ಟಾಗಿತ್ತು.

ಪ್ರಸಕ್ತ ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ಕ್ಕೆ (₹ 6.24 ಲಕ್ಷ ಕೋಟಿ) ನಿಗದಿಪಡಿಸಲು ಸರ್ಕಾರ ಉದ್ದೇಶಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 3.53ರಷ್ಟಿತ್ತು.

2019–20ರ ಹಣಕಾಸು ವರ್ಷದ ಮಧ್ಯಂತರ ಬಜೆಟ್‌ನಲ್ಲಿ ಇದನ್ನು ಪರಿಷ್ಕರಿಸಿ ಶೇ 3.4ಕ್ಕೆ (₹ 6.34 ಲಕ್ಷ ಕೋಟಿ) ನಿಗದಿಪಡಿಸಲಾಗಿದೆ. ಸಣ್ಣ ರೈತರ ಆದಾಯ ಯೋಜನೆಗೆ ₹ 20 ಸಾವಿರ ಕೋಟಿ ತೆಗೆದು ಇರಿಸಿರುವುದರಿಂದ ವಿತ್ತೀಯ ಕೊರತೆ ಹೆಚ್ಚಳವಾಗಿದೆ.

ಮಹಾಲೇಖಪಾಲರು ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಡಿಸೆಂಬರ್‌ ವೇಳೆಗೆ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂದಿರುವ ವರಮಾನವು ₹ 10.84 ಲಕ್ಷ ಕೋಟಿಗಳಷ್ಟಿದೆ. ಇದು ಬಜೆಟ್‌ ಅಂದಾಜಿನ ಶೇ 62.8ರಷ್ಟಿದೆ.

ಸಣ್ಣ ಉಳಿತಾಯದ ಅವಲಂಬನೆ: ಸರ್ಕಾರವು ತನ್ನ ವಿತ್ತೀಯ ಕೊರತೆ ತುಂಬಿಕೊಳ್ಳಲು ಸಣ್ಣ ಉಳಿತಾಯದ ₹ 1.25 ಲಕ್ಷ ಕೋಟಿಯನ್ನು ನೆಚ್ಚಿಕೊಳ್ಳಲಿದೆ.

ಸಣ್ಣ ಉಳಿತಾಯ ರೂಪದಲ್ಲಿ ಸಂಗ್ರಹವಾಗುವ ಮೊತ್ತವನ್ನು ಸಾಲ ಮರುಪಾವತಿಗೆ ಬಳಸುವ ಬದಲಿಗೆ ಹೂಡಿಕೆಗೆ ಬಳಸುವ ಸಾಧ್ಯತೆ ಇದೆ ಎಂದು ಪರಿಣತರು ಹೇಳಿದ್ದಾರೆ.

ಹೂಡಿಕೆಯಿಂದ ಉಳಿಯುವ ಮೊತ್ತವನ್ನು ಸಾಲ ಮರುಪಾವತಿಗೆ ಬಳಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.