ADVERTISEMENT

ಹೊಸ–ಹಳೆಯ ಚಾಲಿ ಅಡಿಕೆ ದರ ಏರುಮುಖ

ಕ್ಯಾಂಪ್ಕೊಗಿಂತ ಖಾಸಗಿ ವರ್ತಕರಿಂದ ಹೆಚ್ಚು ಧಾರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 21:34 IST
Last Updated 11 ಜೂನ್ 2021, 21:34 IST
ಅಡಿಕೆ ಸಂಗ್ರಹ–ಸಾಂದರ್ಭಿಕ ಚಿತ್ರ
ಅಡಿಕೆ ಸಂಗ್ರಹ–ಸಾಂದರ್ಭಿಕ ಚಿತ್ರ   

ಪುತ್ತೂರು: ಕ್ಯಾಂಪ್ಕೊದ ಹೊರಗಿನ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆಯ ಧಾರಣೆ ಮೂರು ದಿನಗಳಿಂದ ಜಿಗಿತ ಕಾಣುತ್ತಿದೆ. ಶುಕ್ರವಾರ ಮಂಗಳೂರು ಚಾಲಿ ಹೊಸ ಅಡಿಕೆಯ ಧಾರಣೆ ₹ 400ರಿಂದ ₹ 412ಕ್ಕೆ ಹಾಗೂ ಹಳೆ ಅಡಿಕೆಯ ಧಾರಣೆ ₹ 500ರಿಂದ ₹ 512ಕ್ಕೆ ಏರಿದೆ.

ಕಳೆದ ವರ್ಷ ಮುಂಗಾರು ಪೂರ್ವ ಅಕಾಲಿಕ ಮಳೆಯಿಂದ ಎಳೆ ಅಡಿಕೆ ಮತ್ತು ಸ್ವಲ್ಪ ಬಲಿತ ಅಡಿಕೆ ಉದುರಿ, ಒಟ್ಟು ಫಸಲಿನಲ್ಲಿ ಶೇಕಡ 35 ರಷ್ಟು ನಷ್ಟವಾಗಿತ್ತು. ಈಗಲೂ ಇದೇ ರೀತಿ ಆಗುತ್ತಿದೆ.

‘ಚಾಲಿ ಅಡಿಕೆಯ ಉತ್ಪಾದನಾ ವೆಚ್ಚ ಹೆಚ್ಚಾ ಗುತ್ತಿದೆ. ಕೂಲಿ ಹೆಚ್ಚಳ, ಕೊಳೆರೋಗ ತಡೆಗೆ ಸಿಂಪಡಣೆ ಮಾಡುವ ಬೋರ್ಡೊ ಮಿಶ್ರಣ ತಯಾರಿಕೆಗೆ ಬಳಸುವ ಸುಣ್ಣ, ಮೈಲುತುತ್ತ ಮತ್ತು ಅಂಟಿನ ಬೆಲೆ ವಿಪರೀತ ಏರಿಕೆಯಾಗಿದೆ. ಬೋರ್ಡೊ ಸಿಂಪಡಿಸುವ ಕಾರ್ಮಿಕರ ಸಂಬಳ ದಿನಕ್ಕೆ ₹ 1,500ಕ್ಕೂ ಹೆಚ್ಚಿಗೆ ಆಗಿದೆ. ಅಡಿಕೆ ಧಾರಣೆ ಏರಿಕೆ ಆಗದಿದ್ದರೆ, ಉತ್ಪಾದನಾ ವೆಚ್ಚ ಮತ್ತು ಫಸಲು ನಷ್ಟ ಭರಿಸಿ, ಲಾಭ ಗಳಿಸುವುದು ಕಷ್ಟ’ ಎನ್ನುತ್ತಾರೆ ಬೆಳೆಗಾರರು.

ADVERTISEMENT

‘ಶುಕ್ರವಾರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಮತ್ತು ಹಳೆ ಅಡಿಕೆಯ ಧಾರಣೆಯು ಕ್ಯಾಂಪ್ಕೊದ ಹೊರಗಿನ ವರ್ತಕರಲ್ಲಿ ಕೆ.ಜಿ.ಗೆ ₹ 12ರಷ್ಟು ಹೆಚ್ಚಾಗಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಹೆಚ್ಚುತ್ತಿದ್ದು, ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ ₹ 450, ಹಳೆ ಅಡಿಕೆ ಕೆ.ಜಿ.ಗೆ ₹ 525ರವರೆಗೆ ತಲುಪುವ ಸಾಧ್ಯತೆಗಳಿವೆ’ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

* ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

-ಡಾ. ವಿಘ್ನೇಶ್ವರ ವರ್ಮಡಿ, ಕೃಷಿ ಮಾರುಕಟ್ಟೆ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.