ಬೆಂಗಳೂರು: ಬ್ಯಾಂಕೇತರ ಹಣಕಾಸು ಕಂಪನಿಗಳಾದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಫಿನ್‌ಕೇರ್ ಎಸ್‌ಎಫ್‌ಬಿ) ವಿಲೀನಗೊಂಡಿವೆ.
ಕಳೆದ ಮಾರ್ಚ್ 4ರಂದು ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಲೀನಕ್ಕೆ ಒಪ್ಪಿಗೆ ನೀಡಿತ್ತು. ಏಪ್ರಿಲ್ 1ರಿಂದ ಈ ವಿಲೀನವು ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ತಿಳಿಸಿದೆ.
ಈ ವಿಲೀನವು ಎಯು ಎಸ್‌ಎಫ್‌ಬಿಯನ್ನು ದೇಶದಾದ್ಯಂತ ರಿಟೇಲ್ ಬ್ಯಾಂಕಿಂಗ್ ಫ್ರಾಂಚೈಸಿಯಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ. ಬ್ಯಾಂಕ್‌ನ ವ್ಯಾಪ್ತಿಯ ವಿಸ್ತರಣೆಯ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ನೆರವಾಗಲಿದೆ ಎಂದು ಹೇಳಿದೆ.
ಕೇವಲ ನಾಲ್ಕೂವರೆ ತಿಂಗಳಲ್ಲಿ ವಿಲೀನ ಪ್ರಕ್ರಿಯೆಯು ಪೂರ್ಣಗೊಂಡಿದೆ. ಇದರಿಂದ ಗ್ರಾಹಕರ ಸಂಖ್ಯೆಯು ಒಂದು ಕೋಟಿಗಿಂತಲೂ ಹೆಚ್ಚಳವಾಗಲಿದೆ. ಒಟ್ಟು ಸಿಬ್ಬಂದಿ ಸಂಖ್ಯೆ 43,500ಗೆ ತಲುಪಿದೆ.
25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್‌ನ 2,350ಕ್ಕೂ ಹೆಚ್ಚು ಕೇಂದ್ರಗಳಿವೆ. ₹89,854 ಕೋಟಿ ಠೇವಣಿ ಹೊಂದಿದ್ದು, ಬ್ಯಾಲೆನ್ಸ್ ಶೀಟ್ ಗಾತ್ರವು ₹1.16 ಲಕ್ಷ ಕೋಟಿ ಆಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
‘ಎಯು ಕುಟುಂಬಕ್ಕೆ ಫಿನ್‌ಕೇರ್‌ನ ಷೇರುದಾರರು ಮತ್ತು ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ. ಈ ವಿಲೀನವು ಕೇವಲ ಎರಡು ಬ್ಯಾಂಕ್‌ಗಳ ಸಮ್ಮಿಲನವನ್ನು ಪ್ರತಿನಿಧಿಸುವುದಿಲ್ಲ. ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುತ್ತದೆ’ ಎಂದು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂಜಯ್ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.