ADVERTISEMENT

ಸಕ್ಕರೆ ಸಬ್ಸಿಡಿ: ಭಾರತದ ವಿರುದ್ಧ ಡಬ್ಲ್ಯುಟಿಒಗೆ ಆಸ್ಟ್ರೇಲಿಯಾ ದೂರು

ಪಿಟಿಐ
Published 17 ನವೆಂಬರ್ 2018, 17:13 IST
Last Updated 17 ನವೆಂಬರ್ 2018, 17:13 IST
SUGAR
SUGAR   

ಮೆಲ್ಬರ್ನ್: ಕಬ್ಬು ಬೆಳೆಗಾರರಿಗೆ ಗರಿಷ್ಠ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿರುವ ಭಾರತದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ನೀಡುವುದಾಗಿ ಆಸ್ಟ್ರೇಲಿಯಾ ತಿಳಿಸಿದೆ.

ಭಾರತ ಅನುಸರಿಸುತ್ತಿರುವ ಸಬ್ಸಿಡಿ ನೀತಿಯಿಂದಾಗಿ ಸಕ್ಕರೆ ಉತ್ಪಾದನೆಯು ಈಗ ವಾರ್ಷಿಕ ಸರಾಸರಿ 2 ಕೋಟಿ ಟನ್‌ಗಳಿಂದ 3.5 ಕೋಟಿ ಟನ್‌ಗಳಿಗೆ ತಲುಪಿದೆ. ‘ಡಬ್ಲ್ಯುಟಿಒ’ ನಿಯಮಗಳಡಿ ರೈತರಿಗೆ ನೆರವಾಗುವ ಮಟ್ಟ ಮೀರಿ ಸಬ್ಸಿಡಿ ನೀಡಲಾಗುತ್ತಿದೆ. ಇದರ ಫಲವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಗಮನಾರ್ಹವಾಗಿ ತಗ್ಗಿದೆ. ಇದರಿಂದ ತನ್ನ ಸಕ್ಕರೆ ಉತ್ಪಾದಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಆಸ್ಟ್ರೇಲಿಯಾ ಆರೋಪಿಸಿದೆ.

ಈ ವಿವಾದವನ್ನು ಭಾರತದ ಜತೆಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿದ ನಂತರವೂ ಸಬ್ಸಿಡಿ ಕಡಿತ ಆಗದ ಕಾರಣಕ್ಕೆ ಆಸ್ಟ್ರೇಲಿಯಾ ಈಗ ‘ಡಬ್ಲ್ಯುಟಿಒ’ಗೆ ದೂರು ನೀಡಲು ನಿರ್ಧರಿಸಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಕೃಷಿಗೆ ಸಂಬಂಧಿಸಿದ ಡಬ್ಲ್ಯುಟಿಒ ಸಮಿತಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾವ ಆಗಲಿದೆ.

ADVERTISEMENT

ವಿಶ್ವದಲ್ಲಿ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದನೆ ದೇಶವಾಗಿರುವ ಭಾರತವು, ಸಕ್ಕರೆಗೆ ಸಂಬಂಧಿಸಿದಂತೆ ಮಾರುಕಟ್ಟೆಯ ನಿಯಮಗಳನ್ನು ವಿರೂಪಗೊಳಿಸುತ್ತಿದೆ ಎಂದು ವ್ಯಾಪಾರ ಸಚಿವ ಸಿಮನ್‌ ಬರ್ಮಿಂಗ್‌ಹ್ಯಾಂ ಟೀಕಿಸಿದ್ದಾರೆ.

‘ದೇಶಿ ಸಕ್ಕರೆ ಉದ್ದಿಮೆ ಎದುರಿಸುತ್ತಿರುವ ಬಿಕ್ಕಟ್ಟನ್ನು ಭಾರತ ಸರ್ಕಾರದ ಜತೆ ಹಲವಾರು ಬಾರಿ ಪ್ರಸ್ತಾಪಿಸಲಾಗಿದೆ. ನಮ್ಮ ಕಳವಳಕ್ಕೆ ಭಾರತ ಇದುವರೆಗೂ ಸ್ಪಂದಿಸಿಲ್ಲ. ನಮ್ಮ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಪರವಾಗಿ ನಿಲ್ಲಬೇಕಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.