ADVERTISEMENT

ಲಾಕ್‌ಡೌನ್‌ ಪರಿಣಾಮ | ನಗದು ಬಿಕ್ಕಟ್ಟು: ವಾಹನ ಮಾರಾಟ ಶೇ 25 ಇಳಿಕೆ ಸಂಭವ

ಪಿಟಿಐ
Published 9 ಜೂನ್ 2020, 19:30 IST
Last Updated 9 ಜೂನ್ 2020, 19:30 IST
car
car   

ನವದೆಹಲಿ: ಕಳೆದ ವರ್ಷ ತೀವ್ರ ಮಾರಾಟ ಕುಸಿತ ಕಂಡಿದ್ದ ವಾಹನ ಉದ್ಯಮಕ್ಕೆ ಇದೀಗ ಲಾಕ್‌ಡೌನ್‌ ಗುಮ್ಮ ಕಾಡುತ್ತಿದ್ದು, ಈ ವರ್ಷವೂ ನೆಮ್ಮದಿಯ ನಿಟ್ಟುಸಿರುಬಿಡುವುದು ಬಹುತೇಕ ಅನುಮಾನವೇ ಸರಿ.

ಇಂಡಿಯಾ ರೇಟಿಂಗ್ಸ್‌ (ಇಂಡ್‌–ರಾ) ನಡೆಸಿದ ಸಮೀಕ್ಷೆಯ ಪ್ರಕಾರ, 2019–20ಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ವಾಹನ ಮಾರಾಟ ಶೇ 25ರಷ್ಟು ಇಳಿಕೆ ಕಾಣಲಿದೆ.

ಕೃಷಿ ಚಟುವಟಿಕೆಗಳ ಮೇಲೆ ತೀವ್ರ ತರದ ಪರಿಣಾಮ ಬೀರದೇ ಇರುವುದರಿಂದ ಟ್ರ್ಯಾಕ್ಟರ್‌ ಹೊರತುಪಡಿಸಿ ಉಳಿದೆಲ್ಲಾ ವಾಹನಗಳ ಮಾರಾಟದಲ್ಲಿ ಇಳಿಕೆ ಆಗಲಿದೆ. ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಲಿದೆ.

ADVERTISEMENT

ದ್ವಿಚಕ್ರ ಮತ್ತು ಪ್ರಯಾಣಿಕ ವಾಹನ ವಿಭಾಗಗಳು ತ್ವರಿತವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಮಾಡಲಾಗಿದೆ. ಮಧ್ಯಮ ಮತ್ತು ಭಾರಿ ಗಾತ್ರದ ವಾಣಿಜ್ಯ ವಾಹನಗಳ ಮಾರಾಟ ಕುಸಿತ ಕಾಣಲಿದೆ.

ಸಾಧ್ಯತೆ:ಆರ್ಥಿಕತೆಯನ್ನು ಅನ್‌ಲಾಕ್‌ ಮಾಡುತ್ತಿರುವುದರಿಂದ ಕೈಗಾರಿಕಾ ಚಟುವಟಿಕೆಗಳು ಮತ್ತೆ ಆರಂಭವಾಗಿದ್ದು, ಗ್ರಾಹಕರ ಖರೀದಿ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಇದರಿಂದ ಬೇಡಿಕೆಯೂ ಸಹಜ ಸ್ಥಿತಿಗೆ ಮರಳಲಿದ್ದು, ಎರಡಂಕಿ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ.

ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ಮತ್ತು ಟ್ರ್ಯಾಕ್ಟರ್‌ ಮಾರಾಟದಲ್ಲಿ ಏರಿಕೆ ಕಂಡುಬರುವ ಸಾಧ್ಯತೆ ಇದೆ.

2019–20ರಲ್ಲಿ ಹಿಂಗಾರು ಬಿತ್ತನೆ ಉತ್ತಮವಾಗಿದೆ. ಈ ವರ್ಷ ಮುಂಗಾರು ವಾಡಿಕೆಯಂತೆ ಸುರಿಯಲಿದ್ದು, ಮುಂಗಾರು ಹಂಗಾಮು ಬಿತ್ತನೆಯೂ ಉತ್ತಮವಾಗಿರುವ ನಿರೀಕ್ಷೆ ಮಾಡಲಾಗುತ್ತಿದೆ. ಅಲ್ಲದೆ, ಲಾಕ್‌ಡೌನ್‌ನಿಂದಕೃಷಿ ಚಟುವಟಿಕೆಗಳು ಹೆಚ್ಚು ಬಾಧಿತವಾಗಿಲ್ಲದೇ ಇರುವುದರಿಂದ ಗ್ರಾಮೀಣ ವರಮಾನ ಹೆಚ್ಚಾಗುವ ಸಾಧ್ಯತೆ ಇದೆ.

ರಫ್ತು ವಹಿವಾಟು ಸಹ ಒತ್ತಡ ಎದುರಿಸಲಿದ್ದು, ಉದ್ಯಮದ ಒಟ್ಟಾರೆ ವರಮಾನ ಶೇ 17–20ರಷ್ಟು ಇಳಿಕೆಯಾಗಲಿದೆ.

ಮೇನಲ್ಲಿ ಭಾರಿ ಕುಸಿತ:ಪ್ರಮುಖವಾಹನತಯಾರಿಕಾ ಕಂಪನಿಗಳ ಮೇ ತಿಂಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಲಾಕ್‌ಡೌನ್‌ ಕಾರಣಕ್ಕೆ ಕಂಪನಿಗಳು ತಯಾರಿಕಾ ಚಟುವಟಿಕೆಗಳನ್ನು ನಿಲ್ಲಿಸಿದ್ದವು. ಜತೆಗೆ ಬೇಡಿಕೆಯೂ ಇಲ್ಲದಿರುವುದರಿಂದ ಮಾರಾಟದ ಮೇಲೆ ಭಾರಿ ಪೆಟ್ಟು ಬಿದ್ದಿದೆ.ಮಾರುತಿ ಸುಜುಕಿ ಇಂಡಿಯಾದ ಮಾರಾಟಶೇ 86ರಷ್ಟು ಕುಸಿತ ಕಂಡಿದ್ದು, ಒಟ್ಟಾರೆ 18,539 ವಾಹನಗಳು ಮಾರಾಟವಾಗಿವೆ. 2019ರ ಮೇನಲ್ಲಿ 1.34 ಲಕ್ಷ ವಾಹನಗಳು ಮಾರಾಟವಾಗಿದ್ದವು.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಒಟ್ಟಾರೆಮಾರಾಟಶೇ 79ರಷ್ಟು ಕುಸಿತ ಕಂಡಿದ್ದು 9,560 ವಾಹನಗಳನ್ನು ಮಾರಾಟ ಮಾಡಿದೆ.ದೇಶಿಮಾರಾಟಶೇ 79ರಷ್ಟು ಕುಸಿದಿದೆ.ಟೊಯೋಟ ಕಂಪನಿಯ ಮಾರಾಟವೂ ಶೇ 86ರಷ್ಟು ಕುಸಿತ ಕಂಡಿದೆ.

ದ್ವಿಚಕ್ರವಾಹನತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೋಟೊ ಕಾರ್ಪ್ ಕಂಪನಿಯಮಾರಾಟಶೇ 83ರಷ್ಟು ಇಳಿಕೆಯಾಗಿದೆ.

ಡಿಜಿಟಲ್‌ನತ್ತ: ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲಾ ಕಂಪನಿಗಳೂ ಡಿಜಿಟಲ್‌ ಮೂಲಕ ವಾಹನ ಮಾರಾಟ ವ್ಯವಸ್ಥೆ ಮಾಡುತ್ತಿವೆ. ಮನೆಯಲ್ಲಿ ಕುಳಿತೇ ಆ್ಯಪ್ ಅಥವಾ ಕಂಪ್ಯೂಟರ್‌ ಮೂಲಕ ಕಂಪನಿಗಳ ಜಾಲತಾಣಕ್ಕೆ ಹೋಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಈ ಪ್ರಕ್ರಿಯೆಯಿಂದಾಗಿ ವಾಹನ ಮಾರಾಟದ ಭಾರಿ ಕುಸಿತವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದಾಗಿದೆ.

ಸುಲಭ ಸಾಲ ಸೌಲಭ್ಯ: ವಾಹನ ಖರೀದಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡಲು ಕಂಪನಿಗಳು ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿವೆ. ಗ್ರಾಹಕರು ಬಯಸುವ ಇಎಂಐ ಆಯ್ಕೆಗಳು, ಆರಂಭಿಕ ತಿಂಗಳುಗಳಲ್ಲಿ ಕಡಿಮೆ ಇಎಂಐ, ವಾರಂಟಿ, ಸೇವಾ ಅವಧಿಗಳಲ್ಲಿ ಬದಲಾವಣೆಯಂತಹ ಸೌಲಭ್ಯಗಳನ್ನು ನೀಡುತ್ತಿವೆ.

ಮಾರಾಟ ಇಳಿಕೆ ನಿರೀಕ್ಷೆ
ದ್ವಿಚಕ್ರ: 20–22%
ಪ್ರಯಾಣಿಕ ವಾಹನ: 22–26%
ಲಘು ವಾಣಿಜ್ಯ ವಾಹನ: 26–30%
ಎಂಎಚ್‌ಸಿವಿ: 35–45%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.