
ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಳೆದ ಐದೂವರೆ ವರ್ಷಗಳಲ್ಲಿ ಒಟ್ಟು ₹6.15 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.
‘ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ರೈಟ್‌ಆಫ್ ಮಾಡಿರುವ ಮೊತ್ತವು ಕಳೆದ ಐದು ಹಣಕಾಸು ವರ್ಷಗಳಲ್ಲಿ ಹಾಗೂ ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ 30ರವರೆಗೆ ₹6.15 ಲಕ್ಷ ಕೋಟಿಯಷ್ಟಾಗಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರವು 2022–23ರ ನಂತರದಲ್ಲಿ ಬಂಡವಾಳದ ನೆರವು ಒದಗಿಸಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಿಕೊಂಡಿವೆ. ಅವು ಲಾಭದಾಯಕವಾಗಿ ನಡೆಯುತ್ತಿವೆ, ಬಂಡವಾಳದ ಸ್ಥಿತಿಯನ್ನು ಸುಧಾರಿಸಿಕೊಂಡಿವೆ ಎಂದು ಚೌಧರಿ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈಗ ಬಂಡವಾಳದ ಅಗತ್ಯಗಳಿಗಾಗಿ ಮಾರುಕಟ್ಟೆ ಮೂಲಗಳನ್ನು ನೆಚ್ಚಿಕೊಳ್ಳುತ್ತಿವೆ, ಆಂತರಿಕ ನಿಧಿಯನ್ನು ಬಳಸಿಕೊಳ್ಳುತ್ತಿವೆ. ಅವು 2022ರ ಏಪ್ರಿಲ್ 1ರ ನಂತರದಲ್ಲಿ ಈಕ್ವಿಟಿ ಮತ್ತು ಸಾಲಪತ್ರಗಳ ಮೂಲಕ ಬಂಡವಾಳ ಮಾರುಕಟ್ಟೆಗಳಿಂದ ಒಟ್ಟು ₹1.79 ಲಕ್ಷ ಕೋಟಿ ಸಂಗ್ರಹಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬ್ಯಾಂಕ್‌ಗಳು ತಮ್ಮ ಆಡಳಿತ ಮಂಡಳಿ ಅನುಮೋದನೆ ನೀಡಿದ ನಿಯಮ ಹಾಗೂ ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ರೈಟ್‌ಆಫ್ ತೀರ್ಮಾನ ತೆಗೆದುಕೊಳ್ಳುತ್ತಿವೆ ಎಂದು ಸಚಿವರು ಹೇಳಿದ್ದಾರೆ. ಆದರೆ ರೈಟ್‌ಆಫ್ ಎಂದರೆ ಸಾಲ ಮನ್ನಾ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈಟ್‌ಆಫ್ ಆದ ಸಾಲಗಳ ವಸೂಲಿಯು ನಿರಂತರ ಪ್ರಕ್ರಿಯೆ. ಬ್ಯಾಂಕ್‌ಗಳು ತಮಗೆ ಲಭ್ಯವಿರುವ ವಿವಿಧ ಮಾರ್ಗಗಳ ಮೂಲಕ ವಸೂಲಾತಿ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ. ‘ಸರ್ಫೇಸಿ ಕಾಯ್ದೆ’ ಅಡಿ ಕ್ರಮ ಜರುಗಿಸುವುದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಎಲ್‌ಟಿ) ಮೊರೆ ಹೋಗುವುದು, ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಕೆಲಸವನ್ನು ಅವು ಮಾಡುತ್ತವೆ ಎಂದು ವಿವರಿಸಿದ್ದಾರೆ.
ವಸೂಲಾಗದ ಸಾಲಗಳಿಗೆ ಹಣ ತೆಗೆದಿರಿಸುವ ಕೆಲಸ ಆಗಿರುತ್ತದೆ. ಹೀಗಾಗಿ ರೈಟ್‌ಆಫ್ ಪ್ರಕ್ರಿಯೆಯ ಕಾರಣದಿಂದಾಗಿ ನಗದು ಹೊರಹರಿಯುವಿಕೆ ಇರುವುದಿಲ್ಲ. ಬ್ಯಾಂಕ್‌ನಲ್ಲಿ ನಗದು ಲಭ್ಯತೆ ಮೇಲೆ ಕೆಟ್ಟ ಪರಿಣಾಮ ಇರುವುದಿಲ್ಲ ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.