ADVERTISEMENT

ಬ್ಯಾಂಕಿಂಗ್ ವಲಯ ಸುಧಾರಿಸಲಿದೆ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅರ್ಧವಾರ್ಷಿಕ ವರದಿಯಲ್ಲಿ ಆಶಾವಾದ

ಪಿಟಿಐ
Published 31 ಡಿಸೆಂಬರ್ 2018, 18:37 IST
Last Updated 31 ಡಿಸೆಂಬರ್ 2018, 18:37 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ಮುಂಬೈ: ದೇಶಿ ಬ್ಯಾಂಕಿಂಗ್‌ ವಲಯವು ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ವಿಶ್ಲೇಷಿಸಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿರುವ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಕ್ರಮೇಣ ಕಡಿಮೆಯಾಗುತ್ತಿದೆ. ಬ್ಯಾಂಕ್‌ಗಳ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಅಗತ್ಯ ಇದೆ. ದುರ್ಬಲ ಬ್ಯಾಂಕ್‌ಗಳಿಗೆ ಪುನರ್ಧನದ ಮೂಲಕ ನೆರವು ನೀಡಬೇಕಾಗಿದೆ’ ಎಂದು ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ದೀರ್ಘಕಾಲದಿಂದ ನಷ್ಟದ ಸುಳಿಯಲ್ಲಿ ಸಿಲುಕಿರುವ ಬ್ಯಾಂಕಿಂಗ್‌ ವಲಯವು, ಈಗ ವಸೂಲಾಗದ ಸಾಲದ ಪ್ರಮಾಣವು ಕಡಿಮೆಯಾಗುತ್ತಿರುವುದರಿಂದ ಚೇತರಿಕೆಯ ಹಾದಿಗೆ ಮರಳುತ್ತಿದೆ’ ಎಂದು ಆರ್‌ಬಿಐನ ಅರ್ಧ ವಾರ್ಷಿಕ ಹಣಕಾಸು ಸ್ಥಿರತೆ ವರದಿಯ ಮುನ್ನುಡಿಯಲ್ಲಿ ದಾಸ್‌ ಅವರು ಬರೆದಿದ್ದಾರೆ.

ADVERTISEMENT

ಶಿಸ್ತು ಬಲಪಡಿಸಿದ ‘ಐಬಿಸಿ: ‘ಎರಡೂವರೆ ವರ್ಷಗಳ ಹಿಂದೆ ಜಾರಿಗೆ ಬಂದಿರುವ ದಿವಾಳಿ ಸಂಹಿತೆಯು (ಐಬಿಸಿ) ಸಾಲ ಮರುಪಾವತಿ ಶಿಸ್ತನ್ನು ಬಲಪಡಿಸಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಸಾಲ ನೀಡಿಕೆಯಲ್ಲಿ ಹೆಚ್ಚು ವಿವೇಕದಿಂದ ವರ್ತಿಸಬೇಕು’ ಎಂದೂ ದಾಸ್ ಹೇಳಿದ್ದಾರೆ.

ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಟ್ಟು ‘ಎನ್‌ಪಿಎ’ ಕಡಿಮೆಯಾಗುತ್ತಿದೆ. ಭವಿಷ್ಯದಲ್ಲಿನ ವೆಚ್ಚಗಳಿಗಾಗಿ ಬ್ಯಾಂಕ್‌ಗಳು ಪ್ರತ್ಯೇಕವಾಗಿ ತೆಗೆದು ಇರಿಸುವ ಮೊತ್ತದ ಅನುಪಾತದಲ್ಲಿಯೂ ಸುಧಾರಣೆಯಾಗುತ್ತಿದೆ. ಇದು ಸಾಲದ ಸಮಸ್ಯೆಯನ್ನು ಎದುರಿಸುವ ಬ್ಯಾಂಕ್‌ಗಳ ಸಾಮರ್ಥ್ಯದ ಪ್ರತೀಕವಾಗಿದೆ. ಇದೊಂದು ಸಕಾರಾತ್ಮಕ ವಿದ್ಯಮಾನವಾಗಿದೆ. 2019ರ ಮಾರ್ಚ್‌ ಅಂತ್ಯದ ವೇಳೆಗೆ ಎಲ್ಲ ಬ್ಯಾಂಕ್‌ಗಳ ‘ಜಿಎನ್‌ಪಿಎ’ ಶೇ 10.3ಕ್ಕೆ ಇಳಿಯಲಿದೆ ಎಂದು ವರದಿಯು ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ, 11 ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಕಠಿಣ ಸ್ವರೂಪದ ನಿರ್ಬಂಧಿತ ಕ್ರಮಗಳನ್ನು ವಿಧಿಸಿತ್ತು. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಮೊಟಕುಗೊಂಡಿತ್ತು. ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷಕ್ಕೂ ಇದು ಎಡೆಮಾಡಿಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.