ADVERTISEMENT

ಉತ್ತಮ ಗಳಿಕೆ ಕಂಡ ಬ್ಯಾಂಕಿಂಗ್‌ ಷೇರುಗಳು

ಬಡ್ಡಿದರ ಹೆಚ್ಚಳ; ವಸೂಲಾಗದ ಸಾಲದ ಪ್ರಮಾಣ ಇಳಿಕೆ

ಪಿಟಿಐ
Published 24 ಜುಲೈ 2022, 16:13 IST
Last Updated 24 ಜುಲೈ 2022, 16:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಡ್ಡಿದರ ಹೆಚ್ಚಳ, ರಿಟೇಲ್‌ ಸಾಲ ನೀಡಿಕೆಯಲ್ಲಿ ವೃದ್ಧಿ ಹಾಗೂ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಇಳಿಕೆ ‌ಆಗಿರುವುದರಿಂದ ಹಲವು ಬ್ಯಾಂಕ್‌ಗಳ ಷೇರುಗಳು ಈ ವರ್ಷ ಉತ್ತಮ ಗಳಿಕೆ ಕಂಡುಕೊಳ್ಳುತ್ತಿವೆ. ಸದ್ಯದ ಮಟ್ಟಿಗೆ ಯಾವುದೇ ಅಡೆತಡೆಗಳು ಇಲ್ಲದೇ ಇರುವುದರಿಂದ ಇದೇ ಸ್ಥಿತಿಯು ಮುಂದುವರಿಯುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಷೇರು ವಿನಿಮಯ ಕೇಂದ್ರದಲ್ಲಿ ಇರುವ ಮಾಹಿತಿಯ ಪ್ರಕಾರ, 2022ರ ಆರಂಭದಿಂದ ಈವರೆಗೆ ಬಿಎಸ್‌ಇ ಸೆನ್ಸೆಕ್ಸ್‌ ಶೇ 4ರಷ್ಟು ಇಳಿಕೆ ಕಂಡಿದೆ. ಬ್ಯಾಂಕ್‌ ಆಫ್‌ ಬರೋಡಾ ಒಳಗೊಂಡು ಕೆಲವು ಪ್ರಮುಖ ಬ್ಯಾಂಕ್‌ಗಳ ಷೇರುಗಳು ಶೇ 30 ರಿಂದ ಶೇ 40ರವರೆಗೆ ಏರಿಕೆ ಕಂಡಿವೆ.

‘ಬಡ್ಡಿದರ ಏರಿಕೆ ಆಗುತ್ತಿರುವುದರಿಂದ ಕೆಲವು ಬ್ಯಾಂಕ್‌ಗಳು ಉತ್ತಮ ಪ್ರದರ್ಶನ ತೋರಿವೆ’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಬ್ಯಾಂಕಿಂಗ್‌ ವಿಶ್ಲೇಷಕ ಅಜಿತ್‌ ಕಬಿ ಹೇಳಿದ್ದಾರೆ. ‘ಐಸಿಐಸಿಐ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಎಸ್‌ಬಿಐ ನಿರೀಕ್ಷಿತ ಮಟ್ಟದಲ್ಲಿಯೇ ಗಳಿಕೆ ಕಂಡುಕೊಂಡಿವೆ. ಆದರೆ, ವಿಲೀನದ ನಿರ್ಧಾರದಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಮೌಲ್ಯ ಇಳಿಕೆ ಆಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಬ್ಯಾಂಕಿಂಗ್ ವಲಯದಲ್ಲಿ ಒಂದು ಕಡೆ ಫೆಡರಲ್‌ ಬ್ಯಾಂಕ್‌ ಉತ್ತಮ ಗಳಿಕೆ ಕಂಡಿದ್ದರೆ, ಇನ್ನೊಂದೆಡೆ ಆರ್‌ಬಿಎಲ್‌ ಬ್ಯಾಂಕ್‌ ಹೂಡಿಕೆದಾರರನ್ನು ಸೆಳೆಯುವಲ್ಲಿ ಹೆಣಗಾಡುತ್ತಿದೆ. ಐಡಿಎಫ್‌ಸಿ ಫರ್ಸ್ಟ್‌ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಸ್ಥಿತಿಯೂ ಹೀಗೆಯೇ ಇದೆ. ಬಿಎಸ್‌ಇನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಈ ವರ್ಷದಲ್ಲಿ ಈವರೆಗೆ ಶೇ 6ರವರೆಗೆ ಇಳಿಕೆ ಕಂಡಿದ್ದರೆ, ಆರ್‌ಬಿಎಲ್‌ ಬ್ಯಾಂಕ್‌ ಶೇ 28ರಷ್ಟು ಮತ್ತು ಐಡಿಎಫ್‌ಸಿ ಫರ್ಸ್ಟ್‌ ಬ್ಯಾಂಕ್ ಶೇ 26ರಷ್ಟು ಕುಸಿತ ಕಂಡಿವೆ’ ಎಂದು ಮಾರ್ಕೆಟ್ಸ್‌ಮೊಜೊ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಸುನಿಲ್‌ ದಮನಿಯಾ ಹೇಳಿದ್ದಾರೆ.

ಬಿಎಸ್‌ಇನಲ್ಲಿ ಕೆಲವು ಬ್ಯಾಂಕ್‌ ಷೇರುಗಳ ಗಳಿಕೆ (2022ರಲ್ಲಿ ಈವರೆಗೆ)

ಬ್ಯಾಂಕ್‌ ಆಫ್‌ ಬರೋಡಾ; 42%

ಫೆಡರಲ್‌ ಬ್ಯಾಂಕ್‌; 29

ಕರೂರ್‌ ವೈಶ್ಯ ಬ್ಯಾಂಕ್‌; 18

ಕೆನರಾ ಬ್ಯಾಂಕ್‌; 15

ಬಂಧನ್‌ ಬ್ಯಾಂಕ್‌; 13

ಎಸ್‌ಬಿಐ; 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.