ADVERTISEMENT

ಬ್ಯಾಂಕ್‌ ಲಾಕರ್‌: ಪರಿಷ್ಕೃತ ಒಪ್ಪಂದ ಜಾರಿ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 17:28 IST
Last Updated 23 ಜನವರಿ 2023, 17:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಬ್ಯಾಂಕ್‌ ಲಾಕರ್‌ ಸೌಲಭ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ಒಪ್ಪಂದಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಸಹಿ ಮಾಡಿಲ್ಲ. ಹೀಗಾಗಿ ಅದನ್ನು ಜಾರಿಗೊಳಿಸುವ ಗಡುವನ್ನು ಡಿಸೆಂಬರ್‌ ಅಂತ್ಯದವರೆಗೆ ವಿಸ್ತರಣೆ ಮಾಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತಿಳಿಸಿದೆ.

ಆರ್‌ಬಿಐನ ಈ ಹಿಂದಿನ ಆದೇಶದ ಪ್ರಕಾರ, ಜನವರಿ 1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ಹೆಚ್ಚಿನ ಸಂಖ್ಯೆಯ ಗ್ರಾಹಕರು ಒಪ್ಪಂದಕ್ಕೆ ಇನ್ನೂ ಸಹಿ ಹಾಕಿಲ್ಲ ಎನ್ನುವುದು ತಿಳಿದುಬಂದಿದೆ.

ಪರಿಷ್ಕೃತ ಒಪ್ಪಂದಗಳಿಗೆ ಸಹಿ ಮಾಡಬೇಕು ಎಂದು ಬ್ಯಾಂಕ್‌ಗಳು ಗ್ರಾಹಕರಿಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ ಎಂದು ಆರ್‌ಬಿಐ ಹೇಳಿದೆ.

ADVERTISEMENT

ಅಕ್ರಮವಾದ ಅಥವಾ ಅಪಾಯಕಾರಿಯಾದ ಯಾವುದೇ ವಸ್ತುವನ್ನು ಲಾಕರ್‌ನಲ್ಲಿ ಇರಿಸುವುದಿಲ್ಲ ಎಂಬ ಒಪ್ಪಂದಕ್ಕೆ ಬ್ಯಾಂಕ್‌ಗಳು ಲಾಕರ್‌ ಸೌಲಭ್ಯ ಪಡೆಯುವವರಿಂದ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ. ಹೊಸ ನಿಯಮಗಳು ಈಗಾಗಲೇ ಇರುವ ಲಾಕರ್‌ಗಳಿಗೂ,
ಹೊಸ ಲಾಕರ್‌ಗಳಿಗೂ ಅನ್ವಯವಾಗಲಿವೆ.

ಜೂನ್‌ 30ರ ಒಳಗಾಗಿ ಶೇ 50ರಷ್ಟು ಗ್ರಾಹಕರು ಮತ್ತು ಸೆಪ್ಟೆಂಬರ್‌ 30ರ ಒಳಗಾಗಿ ಶೇ 75ರಷ್ಟು ಗ್ರಾಹಕರು ಒಪ್ಪಂದಕ್ಕೆ ಸಹಿ ಮಾಡಿರುವಂತೆ ನೋಡಿಕೊಳ್ಳಿ ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ.

ಒಪ್ಪಂದಕ್ಕೆ ಸಹಿ ಮಾಡಿಲ್ಲ ಎನ್ನುವ ಕಾರಣಕ್ಕೆ ಒಂದೊಮ್ಮೆ ಲಾಕರ್‌ ಸೌಲಭ್ಯ ಸ್ಥಗಿಗೊಳಿಸಿದ್ದರೆ, ತಕ್ಷಣವೇ ಬಳಕೆಗೆ ಲಭ್ಯವಾಗುವಂತೆ ಮಾಡಿ ಎಂದೂ ಹೇಳಿದೆ.

ಪರಿಷ್ಕೃತ ನಿಯಮಗಳ ಪ್ರಕಾರ, ಅಗ್ನಿ ಅನಾಹುತ, ಕಳ್ಳತನ, ಕಟ್ಟಡ ಕುಸಿತ ಅಥವಾ ಬ್ಯಾಂಕ್‌ನ ಸಿಬ್ಬಂದಿಯಿಂದ ವಂಚನೆ
ನಡೆದಲ್ಲಿ ಬ್ಯಾಂಕ್‌ಗಳು ಭರಿಸಬೇಕಾದ ಮೊತ್ತವು ಲಾಕರ್‌ನ ವಾರ್ಷಿಕ ಬಾಡಿಗೆ ಮೊತ್ತದ ನೂರು ಪಟ್ಟು ಮೊತ್ತಕ್ಕೆ ಸೀಮಿತ
ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.