ADVERTISEMENT

ರಿಲಯನ್ಸ್ ಕ್ಯಾಪಿಟಲ್‌: ಖರೀದಿ ಆಸಕ್ತಿ ತಿಳಿಸಲು ಮಾರ್ಚ್‌ 11ರ ಗಡುವು

ಪಿಟಿಐ
Published 19 ಫೆಬ್ರುವರಿ 2022, 11:03 IST
Last Updated 19 ಫೆಬ್ರುವರಿ 2022, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್‌ ಕಂಪನಿಯನ್ನು ಖರೀದಿಸುವ ಸಂಬಂಧ ಆಸಕ್ತಿಪತ್ರ ಸಲ್ಲಿಸುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲಾಗಿದೆ.

ಸಾಲದ ಸುಳಿಗೆ ಸಿಲುಕಿರುವ ಕಂಪನಿಯನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲು ಮಾರ್ಚ್‌ 11 ಅಂತಿಮ ದಿನವಾಗಿದೆ. ಆ ಬಳಿಕ ಕಂಪನಿಯ ಪುನಶ್ಚೇತನ ಯೋಜನೆ ಸಲ್ಲಿಕೆಗೆ ಏಪ್ರಿಲ್‌ 20ರ ಗಡುವು ನೀಡಲಾಗಿದೆ ಎಂದು ರಿಲಯನ್ಸ್‌ ಕ್ಯಾಪಿಟಲ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೇಮಿಸಿರುವ ಆಡಳಿತಾಧಿಕಾರಿಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ವೈ. ನಾಗೇಶ್ವರ ರಾವ್ ಅವರು ದಿವಾಳಿ ಪ್ರಕ್ರಿಯೆಯ ಭಾಗವಾಗಿ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಈ ಆಹ್ವಾನ ನೀಡಿದ್ದಾರೆ.

ADVERTISEMENT

ಕಂಪನಿಯ ಒಟ್ಟಾರೆ ಸಾಲದ ಮೊತ್ತವು ₹ 40 ಸಾವಿರ ಕೋಟಿಗಳಷ್ಟು ಇದೆ ಎಂದು2021ರ ಸೆಪ್ಟೆಂಬರ್‌ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕಂಪನಿಯು ಷೇರುದಾರರಿಗೆ ತಿಳಿಸಿತ್ತು.

ಸಾಲ ಮರುಪಾವತಿಸದೇ ಇರುವುದು ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿನ ವೈಫಲ್ಯದ ಕಾರಣಗಳಿಗಾಗಿ ಕಂಪನಿಯ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಆರ್‌ಬಿಐ2021ರ ನವೆಂಬರ್‌ 29ರಂದು ಆದೇಶ ಹೊರಡಿಸಿದೆ. ಆ ಬಳಿಕದಿವಾಳಿ ಪ್ರಕ್ರಿಯೆಗಾಗಿ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮುಂಬೈ ಶಾಖೆಗೆ ಡಿಸೆಂಬರ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿದೆ.

ಆರ್‌ಬಿಐ ಈಚೆಗೆ ದಿವಾಳಿ ಪ್ರಕ್ರಿಯೆ ಆರಂಭಿಸಿದ ಮೂರನೇ ಅತಿದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಇದಾಗಿದೆ. ಎಸ್‌ಆರ್‌ಇಐ ಸಮೂಹ ಮತ್ತು ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ (ಡಿಎಚ್‌ಎಫ್‌ಎಲ್‌) ಇನ್ನುಳಿದ ಎರಡು ಎನ್‌ಬಿಎಫ್‌ಸಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.