ADVERTISEMENT

ಬಿಎಸ್‌6 ಹೊರೆ: ಗ್ರಾಹಕರಿಗೆ ಸಂಪೂರ್ಣ ವರ್ಗಾವಣೆ ಇಲ್ಲ ಎಂದ ಟಿಕೆಎಂ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌

ಪಿಟಿಐ
Published 12 ಜನವರಿ 2020, 19:44 IST
Last Updated 12 ಜನವರಿ 2020, 19:44 IST

ನವದೆಹಲಿ : ‘ಮಾಲಿನ್ಯ ನಿಯಂತ್ರಣದ ಬಿಎಸ್‌6 ಮಾನದಂಡ ಅಳವಡಿಕೆಯಿಂದ ಆಗುವ ಹೆಚ್ಚುವರಿ ವೆಚ್ಚವನ್ನು ಆರಂಭದಲ್ಲಿಯೇ ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸದೇ ಇರಲು ಟೊಯೋಟ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ನಿರ್ಧರಿಸಿದೆ.

‘ಗ್ರಾಹಕರಿಗೆ ದುಬಾರಿ ಬೆಲೆ ಭರಿಸಲು ಕಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಒಂದೇ ಬಾರಿಗೆ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ’ ಎಂದು ಕಂಪನಿಯಹಿರಿಯ ಉಪಾಧ್ಯಕ್ಷ ನವೀನ್‌ ಸೋನಿ ತಿಳಿಸಿದ್ದಾರೆ.

‘ಹೊಸ ಮಾನದಂಡದ ಅಳವಡಿಕೆಯಿಂದ ಆಗಿರುವ ವೆಚ್ಚದಲ್ಲಿ ಶೇ 50ಕ್ಕಿಂತಲೂ ಕಡಿಮೆಯನ್ನಷ್ಟೇ ಗ್ರಾಹಕರಿಗೆ ವರ್ಗಾಯಿಸಲಾಗಿದೆ. ಎಲ್ಲಿಯವರೆಗೆ ಈ ರೀತಿ ಮಾಡಲು ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ. ಹೀಗಾಗಿ ಸೀಮಿತ ಆರಂಭಿಕ ಕೊಡುಗೆ ರೂಪದಲ್ಲಿ ಕ್ರಿಸ್ಟಾ ನೀಡಲಾಗುತ್ತಿದೆ. ಗ್ರಾಹಕರು ಮತ್ತು ಮಾರುಕಟ್ಟೆಯ ಪ‍ರಿಸ್ಥಿತಿಯನ್ನು ಗಮನಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು.

ADVERTISEMENT

‘ಮೂರನೇ ತ್ರೈಮಾಸಿಕದಲ್ಲಿ ವಾಹನ ಮಾರಾಟ ಚೇತರಿಕೆ ಕಾಣಲಿದೆ. ಬಿಎಸ್‌6 ತಂತ್ರಜ್ಞಾನ ಮತ್ತು ಅದನ್ನು ಜಾರಿ ಮಾಡುವುದರಿಂದ ಆಗಲಿರುವ ಬೆಲೆ ಏರಿಕೆಯನ್ನು ಗ್ರಾಹಕರು ಅರ್ಥ ಮಾಡಿಕೊಳ್ಳುವುದರಿಂದ ಮಾರಾಟದಲ್ಲಿ ಏರಿಕೆ ಕಂಡುಬರಲಿದೆ. ತಿಂಗಳಾಂತ್ಯಕ್ಕೆ ಅಥವಾ ಫೆಬ್ರುವರಿಯ ಆರಂಭದಲ್ಲಿ ಫಾರ್ಚುನರ್‌ನ ಡೀಸೆಲ್‌ ಆವೃತ್ತಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಕಂಪನಿಯು ಈಚೆಗಷ್ಟೇ ಬಿಡುಗಡೆ ಮಾಡಿರುವ ಬಿಎಸ್‌6 ಮಾನದಂಡಕ್ಕೆ ಅನುಗುಣವಾದ ಇನೊವಾ ಕ್ರಿಸ್ಟಾದ ಬೆಲೆಯು (ದೆಹಲಿ ಎಕ್ಸ್‌ ಷೋರೂಂ) ₹ 15.36 ಲಕ್ಷದಿಂದ ₹ 24.06 ಲಕ್ಷದವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.