ADVERTISEMENT

ಸಕಾರಾತ್ಮಕ ಹಾದಿಯಲ್ಲಿ ಸೇವಾ ವಲಯ

ಪಿಟಿಐ
Published 3 ಡಿಸೆಂಬರ್ 2020, 11:47 IST
Last Updated 3 ಡಿಸೆಂಬರ್ 2020, 11:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆ ಸತತ ಎರಡನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಹಾದಿಯಲ್ಲಿಯೇ ಸಾಗಿದೆ. ಆದರೆ, ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಬೆಳವಣಿಗೆ ಪ್ರಮಾಣ ತುಸು ಇಳಿಕೆ ಕಂಡಿದೆ.

ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಅಕ್ಟೋಬರ್‌ನಲ್ಲಿ 54.1ರಷ್ಟಿತ್ತು. ಇದು ನವೆಂಬರ್‌ನಲ್ಲಿ 53.7ಕ್ಕೆ ಇಳಿಕೆಯಾಗಿದೆ. ಹೀಗಿದ್ದರು ಸಹ ಸೂಚ್ಯಂಕವು 50ಕ್ಕಿಂತಲೂ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆಯನ್ನು ಸೂಚಿಸುತ್ತಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ತಿಳಿಸಿದೆ.

ಫೆಬ್ರುವರಿ ತಿಂಗಳ ಬಳಿಕ ಅಕ್ಟೋಬರ್‌ನಲ್ಲಿ ಸೂಚ್ಯಂಕವು 50ಕ್ಕಿಂತಲೂ ಮೇಲಕ್ಕೆ ಏರಿಕೆ ಕಂಡಿದ್ದು, ನವೆಂಬರ್‌ನಲ್ಲಿಯೂ ಅದೇ ಬೆಳವಣಿಗೆ ಮುಂದುವರಿದಿದೆ. ಲಾಕ್‌ಡೌನ್‌ ನಿರ್ಬಂಧಗಳ ಸಡಿಲಿಕೆ ಹಾಗೂ ಬೇಡಿಕೆಯಲ್ಲಿ ಸುಧಾರಣೆ ಕಾಣುತ್ತಿರುವುದರಿಂದ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಿದೆ.

ADVERTISEMENT

‘ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸೇವಾ ವಲಯವು ಇದೀಗ ಚೇತರಿಸಿಕೊಳ್ಳುತ್ತಿದೆ. ಬೇಡಿಕೆ ಸೃಷ್ಟಿಯಾಗುತ್ತಿರುವುದರಿಂದ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆತಿದ್ದು, ಉದ್ಯೋಗ ಸೃಷ್ಟಿಯಲ್ಲಿಯೂ ಏರಿಕೆಯಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪಾಲಿಯಾನ ಡಿ ಲಿಮಾ ತಿಳಿಸಿದ್ದಾರೆ.

ಎಂಟು ತಿಂಗಳವರೆಗೆ ಉದ್ಯೋಗ ಕಡಿತ ಮಾಡಿದ್ದ ಸೇವಾ ವಲಯದ ಕಂಪನಿಗಳು ನವೆಂಬರ್‌ನಲ್ಲಿ ಹೊಸದಾಗಿ ಕೆಲಸಗಾರರನ್ನು ನೇಮಿಸಿಕೊಂಡಿವೆ. ಆದರೆ, ಕೆಲವು ಕಂಪನಿಗಳುಬೇಡಿಕೆ ನಿರ್ವಹಿಸುವಷ್ಟು ಕೆಲಸಗಾರರನ್ನು ಹೊಂದಿರುವುದರಿಂದ ಹೊಸ ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಉದ್ಯೋಗ ಸೃಷ್ಟಿಯ ಒಟ್ಟಾರೆ ಬೆಳವಣಿಗೆ ಪ್ರಮಾಣ ಕಡಿಮೆ ಪ್ರಮಾಣದ್ದಾಗಿದೆ.

‘ಕೋವಿಡ್‌–19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಉಂಟುಮಾಡಿರುವ ನಕಾರಾತ್ಮಕ ಪರಿಣಾಮಗಳಿಂದ ಹೊರಬರಲು ಕಡಿಮೆ ಬಡ್ಡಿದರವು ಸ್ವಲ್ಪ ಮಟ್ಟಿಗೆ ನೆರವು ನೀಡಿದೆ. ಇದರ ಜತೆಗೆ ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿಯು ದೇಶಿ ಬೇಡಿಕೆ ಹೆಚ್ಚಿಸಲು ಬೆಂಬಲ ನೀಡಿದೆ. ಆದರೆ, ಹಣದುಬ್ಬರದ ಒತ್ತಡವು ಚೇತರಿಕೆಯ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ’ ಎಂದು ಲಿಮಾ ಹೇಳಿದ್ದಾರೆ.

ಸೇವೆಗಳು ಮತ್ತು ತಯಾರಿಕಾ ವಲಯದ ಒಟ್ಟಾರೆ ಬೆಳವಣಿಗೆಯನ್ನು ಸೂಚಿಸುವ ಕಂಪೋಸಿಟ್‌ ಪಿಎಂಐ ಸೂಚ್ಯಂಕವು ಅಕ್ಟೋಬರ್‌ನಲ್ಲಿ 58ರಷ್ಟಿತ್ತು. ಅದು ನವೆಂಬರ್‌ನಲ್ಲಿ 56.3ಕ್ಕೆ ಇಳಿಕೆಯಾಗಿದೆ. ಎರಡೂ ವಲಯಗಳ ಮಾರಾಟದಲ್ಲಿ ನಿಧಾನಗತಿಯ ಏರಿಕೆ ಕಾಣುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.