ADVERTISEMENT

ಕಡಿಮೆ ವೇತನ ಹೊಂದಿರುವ ಬೈಜುಸ್‌ನ ಶೇ 25ರಷ್ಟು ಸಿಬ್ಬಂದಿಗೆ ಪೂರ್ಣ ಸಂಬಳ ಪಾವತಿ

ಪಿಟಿಐ
Published 10 ಮಾರ್ಚ್ 2024, 16:20 IST
Last Updated 10 ಮಾರ್ಚ್ 2024, 16:20 IST
...
...   

ನವದೆಹಲಿ: ಬೈಜುಸ್‌ ಕಂಪನಿಯು ಕಡಿಮೆ ವೇತನ ಶ್ರೇಣಿ ಹೊಂದಿರುವ ಶೇ 25ರಷ್ಟು ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಂಬಳ ಪಾವತಿಸಿದೆ. ಉಳಿದ ಉದ್ಯೋಗಿಗಳಿಗೆ ಭಾಗಶಃ ಪಾವತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಬೈಜುಸ್‌ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್‌ ಆ್ಯಂಡ್‌ ಲರ್ನ್‌ನಲ್ಲಿ ತಲೆದೋರಿರುವ ಬಿಕ್ಕಟ್ಟಿನಿಂದ ಸಂಬಳ ಪಾವತಿಗೆ ವಿಳಂಬವಾಗಿತ್ತು. 

‘ಕೆಲವು ಹೂಡಿಕೆದಾರರ ತಕರಾರಿನಿಂದಾಗಿ ಕಂಪನಿಯು ಆರ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿದೆ. ಸದ್ಯ ಸಂಬಳ ಪಾವತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದು ಆಡಳಿತ ಮಂಡಳಿಯು ಭಾನುವಾರ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. 

ADVERTISEMENT

‘ಫೆಬ್ರುವರಿ ತಿಂಗಳ ಸಂಬಳ ಪಾವತಿ ಪ್ರಕ್ರಿಯೆಯು ಶುಕ್ರವಾರ ರಾತ್ರಿ ಪೂರ್ಣಗೊಂಡಿದೆ. ಎರಡನೇ ಶನಿವಾರ ಬ್ಯಾಂಕ್‌ ರಜೆಯಾಗಿರುವುದರಿಂದ ಸೋಮವಾರದಂದು ನಿಮ್ಮ ಖಾತೆಗಳಿಗೆ ಜಮೆಯಾಗಲಿದೆ. ವೇತನ ಪಾವತಿಯಲ್ಲಿ ಆಗಿರುವ ವಿಳಂಬಕ್ಕೆ ಕ್ಷಮೆ ಕೋರುತ್ತೇವೆ’ ಎಂದು ಹೇಳಿದೆ. 

ಇತ್ತೀಚೆಗೆ ನಡೆದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಸಂಸ್ಥಾಪಕ ರವೀಂದ್ರನ್‌ ಸೇರಿದಂತೆ ಅವರ ಕುಟುಂಬಸ್ಥರನ್ನು ಆಡಳಿತ ಮಂಡಳಿಯಿಂದ ಪದಚ್ಯುತಿಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ, ಆರು ಪ್ರಮುಖ ಹೂಡಿಕೆದಾರರ ಪೈಕಿ ನಾಲ್ವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಘಟಕದ ಮೊರೆ ಹೋಗಿದ್ದು, ಆಡಳಿತ ಮಂಡಳಿಯನ್ನು ಪುನರ್‌ ರಚಿಸುವಂತೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.