ADVERTISEMENT

ತುಮಕೂರಿನಲ್ಲಿ ಕೈಗಾರಿಕಾ ಪಾರ್ಕ್‌: ಕೇಂದ್ರ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 16:32 IST
Last Updated 30 ಡಿಸೆಂಬರ್ 2020, 16:32 IST
ಕೈಗಾರಿಕಾ ಕಾರಿಡಾರ್–ಸಾಂದರ್ಭಿಕ ಚಿತ್ರ
ಕೈಗಾರಿಕಾ ಕಾರಿಡಾರ್–ಸಾಂದರ್ಭಿಕ ಚಿತ್ರ   

ನವದೆಹಲಿ: ಅಂದಾಜು ಮೂರು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಕೇಂದ್ರ ಸಚಿವ ಸಂಪುಟವು ತುಮಕೂರಿನಲ್ಲಿ ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲಿ ಕೈಗಾರಿಕಾ ಕಾರಿಡಾರ್ ನೋಡ್ ಸ್ಥಾಪಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ತುಮಕೂರು ಕೈಗಾರಿಕಾ ಪ್ರದೇಶವನ್ನು ಅಂದಾಜು ₹ 1,702 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಇದು ಅಂದಾಜು 88,500 ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ.

‘ಇಲ್ಲಿ ಅಭಿವೃದ್ಧಿಪಡಿಸುವ ಜಮೀನು, ಹೂಡಿಕೆ ಆಕರ್ಷಿಸಲು ತಕ್ಷಣಕ್ಕೆ ಲಭ್ಯವಾಗಲಿದೆ. ಕೈಗಾರಿಕಾ ಕಾರಿಡಾರ್ ಯೋಜನೆಯು ಆತ್ಮನಿರ್ಭರ ಭಾರತ ನಿರ್ಮಾಣದ ಉದ್ದೇಶವನ್ನು ಸಾಧಿಸಲು ಯತ್ನಿಸುತ್ತದೆ. ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಿ, ದೇಶದ ಎಲ್ಲೆಡೆ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಕೃಷ್ಣಪಟ್ಟಣದಲ್ಲಿನ ಕೈಗಾರಿಕಾ ಪ್ರದೇಶವು ₹ 2,139 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದು ಅಂದಾಜು 98 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆ ಇದೆ.

ಕೃಷ್ಣಪಟ್ಟಣ ಮತ್ತು ತುಮಕೂರು ಕೈಗಾರಿಕಾ ಪ್ರದೇಶಗಳಿಗೆ ವಿಶ್ವದರ್ಜೆಯ ಮೂಲಸೌಕರ್ಯ, ಬಂದರುಗಳಿಂದ ಸರಕು ಸಾಗಣೆಗೆ ರಸ್ತೆ ಮತ್ತು ರೈಲು ಸಂಪರ್ಕ, ನೆಚ್ಚಿಕೊಳ್ಳಬಹುದಾದಂತಹ ಇಂಧನ ಪೂರೈಕೆ ಇರಲಿದೆ ಎಂದು ಜಾವಡೇಕರ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.