ನವದೆಹಲಿ: ಮುಂಗಾರು ಅವಧಿಗೆ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿ ಆ್ಯಂಡ್ ಕೆ (ಫಾಸ್ಪೆಟಿಕ್ ಮತ್ತು ಪೊಟ್ಯಾಸಿಕ್) ರಸಗೊಬ್ಬರಕ್ಕೆ ಸಬ್ಸಿಡಿ ಮುಂದುವರಿಸಲು ₹37,216 ಕೋಟಿ ಅನುದಾನಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯು ಶುಕ್ರವಾರ ಒಪ್ಪಿಗೆ ನೀಡಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಸಗೊಬ್ಬರದ ಸಹಾಯಧನ ವಿಸ್ತರಣೆಗೆ (ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ವರೆಗೆ) ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಇದರಿಂದ ರೈತರಿಗೆ ಕೈಗಟಗುವ ಬೆಲೆಯಲ್ಲಿ ರಸಗೊಬ್ಬರ ದೊರೆಯಲಿದೆ. ಡಿಎಪಿ ರಸಗೊಬ್ಬರದ ಬೆಲೆ ಏರಿಕೆ ಮಾಡುವುದಿಲ್ಲ ಎಂದರು.
ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಯೋಜನೆ: ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ₹22,919 ಕೋಟಿ ಯೋಜನೆಗೆ ಸಭೆಯು ಅನುಮೋದನೆ ನೀಡಿದೆ.
ಈ ವಲಯದಲ್ಲಿ ಜಾಗತಿಕ ಮತ್ತು ದೇಶೀಯವಾಗಿ ಬಂಡವಾಳ ಆಕರ್ಷಿಸಲು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಯೋಜನೆಗೆ ಒಪ್ಪಿಗೆ ನೀಡಿದೆ.
‘ಈ ಯೋಜನೆಯಡಿ ₹59,350 ಕೋಟಿ ಬಂಡವಾಳವನ್ನು ನಿರೀಕ್ಷಿಸಲಾಗಿದೆ. ಜೊತೆಗೆ, 91,600 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.