ADVERTISEMENT

ನಾಲ್ಕನೇ ತ್ರೈಮಾಸಿಕ: ಕೆನರಾ ಬ್ಯಾಂಕ್‌ ಲಾಭ ಶೇ 90ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಮೇ 2023, 16:13 IST
Last Updated 8 ಮೇ 2023, 16:13 IST
ಕೆ. ಸತ್ಯನಾರಾಯಣ ರಾಜು, ಕೆನರಾ ಬ್ಯಾಂಕ್‌ನ ಸಿಇಒ 
ಕೆ. ಸತ್ಯನಾರಾಯಣ ರಾಜು, ಕೆನರಾ ಬ್ಯಾಂಕ್‌ನ ಸಿಇಒ    

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ನಿವ್ವಳ ಲಾಭವು 2022–23ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 90.63ರಷ್ಟು ಹೆಚ್ಚಾಗಿದ್ದು ₹3,174 ಕೋಟಿಗೆ ತಲುಪಿದೆ.

2021–22ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ₹1,666 ಕೋಟಿಯಷ್ಟು ಇತ್ತು ಎಂದು ಬ್ಯಾಂಕ್‌ನ ಸಿಇಒ ಕೆ. ಸತ್ಯನಾರಾಯಣ ರಾಜು ಅವರು ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂಲ ವರಮಾನದಲ್ಲಿ ಹೆಚ್ಚಳ ಮತ್ತು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಇಳಿಕೆ ಆಗಿರುವುದು ನಿವ್ವಳ ಲಾಭ ಹೆಚ್ಚಾಗಲು ಕಾರಣ ಎಂದು ಬ್ಯಾಂಕ್‌ ಹೇಳಿದೆ.

ADVERTISEMENT

ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ವರಮಾನವು (ಎನ್‌ಐಐ) ಶೇ 23ರಷ್ಟು ಹೆಚ್ಚಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 2.16ರಷ್ಟು ಇಳಿಕೆ ಕಂಡಿದ್ದು ಶೇ 5.35ಕ್ಕೆ ತಲುಪಿದೆ. ನಿವ್ವಳ ಎನ್‌ಪಿಎ ಶೇ 0.92ರಷ್ಟು ಕಡಿಮೆ ಆಗಿ ಶೇ 1.73ಕ್ಕೆ ಇಳಿಕೆಯಾಗಿದೆ.

2023ರ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ತೆರಿಗೆ ನಂತರದ ಲಾಭವು ₹6,124 ಕೋಟಿಯಿಂದ ₹11,254 ಕೋಟಿಗೆ ಏರಿಕೆ ಕಂಡಿದೆ.

2023ರ ಮಾರ್ಚ್‌ 31ಕ್ಕೆ ಕೊನೆಗೊಂಡ ವರ್ಷಕ್ಕೆ ಪ್ರತಿ ಷೇರಿಗೆ ₹12 ಲಾಭಾಂಶ ನೀಡಲು ಆಡಳಿತ ಮಂಡಳಿಯು ಶಿಫಾರಸು ಮಾಡಿರುವುದಾಗಿ ರಾಜು ಮಾಹಿತಿ ನೀಡಿದರು.

2023-24ನೇ ಹಣಕಾಸು ವರ್ಷದಲ್ಲಿ  ಸಾಲ ನೀಡಿಕೆಯಲ್ಲಿ ಎರಡಂಕಿ ಪ್ರಗತಿ ಸಾಧಿಸುವ ಗುರಿಯನ್ನು ಹೊಂದಿರುವುದಾಗಿ ರಾಜು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.