ADVERTISEMENT

₹2,000 ಮುಖಬೆಲೆಯ ನೋಟು ಹಿಂತೆಗೆತ: ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿದ ನಗದು ವಹಿವಾಟು

ಪಿಟಿಐ
Published 22 ಮೇ 2023, 14:44 IST
Last Updated 22 ಮೇ 2023, 14:44 IST
   

ನವದೆಹಲಿ: ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಖರೀದಿಸುವವರು ₹2,000 ಮುಖಬೆಲೆಯ ನೋಟುಗಳನ್ನು ಬಳಸಿ ಹಣ ಪಾವತಿ ಮಾಡುವುದು ಶೇಕಡ 90ರಷ್ಟು ಹೆಚ್ಚಾಗಿದೆ ಎಂದು ಅಖಿಲ ಭಾರತ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಅಧ್ಯಕ್ಷ ಅಜಯ್ ಬನ್ಸಲ್ ಹೇಳಿದ್ದಾರೆ.

₹2,000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಸೆಪ್ಟೆಂಬರ್‌ 30ರ ನಂತರ ಚಲಾವಣೆಯಿಂದ ಹಿಂಪಡೆಯಲಿದೆ. ಆರ್‌ಬಿಐ ಈ ವಿಚಾರ ತಿಳಿಸಿದ್ದು ಶುಕ್ರವಾರ. ಅದಕ್ಕೂ ಮೊದಲು ₹2,000 ಮುಖಬೆಲೆಯ ನೋಟು ಬಳಸಿ ಇಂಧನ ಖರೀದಿಸುವ ಪ್ರಮಾಣವು ಒಟ್ಟು ನಗದು ವಹಿವಾಟಿನ ಶೇ 10ರಷ್ಟು ಮಾತ್ರ ಇತ್ತು. ಆದರೆ ಈಗ, ಒಟ್ಟು ನಗದು ವಹಿವಾಟಿನಲ್ಲಿ ₹2,000 ಮುಖಬೆಲೆಯ ನೋಟುಗಳ ಪ್ರಮಾಣವು ಶೇ 90ರಷ್ಟು ಆಗಿದೆ. ಗ್ರಾಹಕರು ₹100 ಅಥವಾ ₹200 ಮೌಲ್ಯದ ಇಂಧನ ಖರೀದಿಸಿದರೂ, ₹2,000 ಮುಖಬೆಲೆಯ ನೋಟು ನೀಡುತ್ತಿದ್ದಾರೆ ಎಂದು ಬನ್ಸಲ್ ತಿಳಿಸಿದ್ದಾರೆ.

ಸಣ್ಣ ಮುಖಬೆಲೆಯ ನೋಟುಗಳನ್ನು ಅಗತ್ಯ ಪ್ರಮಾಣದಲ್ಲಿ ಬ್ಯಾಂಕ್‌ಗಳಿಗೆ ಪೂರೈಸುವಂತೆ ಆರ್‌ಬಿಐಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ದೇಶದಾದ್ಯಂತ ಬಂಕ್‌ಗಳಲ್ಲಿ ಸಣ್ಣ ಮುಖಬೆಲೆಯ ನೋಟುಗಳ ಕೊರತೆ ತೀವ್ರವಾಗಿದೆ ಎಂದಿದ್ದಾರೆ.

ADVERTISEMENT

ಆರ್‌ಬಿಐ ಘೋಷಣೆಯ ಮೊದಲು ಡಿಜಿಟಲ್ ಪಾವತಿಗಳು ಒಟ್ಟು ಮಾರಾಟದ ಶೇ 40ರಷ್ಟು ಇರುತ್ತಿದ್ದವು. ಈಗ ಅದರ ಪ್ರಮಾಣವು ಶೇ 10ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.