ADVERTISEMENT

ವಾರ್ಷಿಕ ಗುರಿಯ ಶೇ 52ಕ್ಕೆ ತಲುಪಿದ ವಿತ್ತೀಯ ಕೊರತೆ

ಹಣಕಾಸು ವರ್ಷದ ಮೊದಲ 2 ತಿಂಗಳು

ಪಿಟಿಐ
Published 28 ಜೂನ್ 2019, 18:30 IST
Last Updated 28 ಜೂನ್ 2019, 18:30 IST

ನವದೆಹಲಿ: ವಿತ್ತೀಯ ಕೊರತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿಯೇ ಬಜೆಟ್‌ನಲ್ಲಿ ಅಂದಾಜಿಸಿದ್ದ ಗುರಿಯ
ಶೇ 52ರಷ್ಟಕ್ಕೆತಲುಪಿದೆ.

ಕೇಂದ್ರ ಸರ್ಕಾರದ ವೆಚ್ಚ ಮತ್ತು ವರಮಾನದ ನಡುವಣ ಅಂತರವಾಗಿರುವ ವಿತ್ತೀಯ ಕೊರತೆಯು ₹ 3.66 ಲಕ್ಷ ಕೋಟಿಗೆ ತಲುಪಿದೆ ಎಂದು ಮಹಾ ಲೆಕ್ಕಪತ್ರ ನಿಯಂತ್ರಕರ (ಸಿಜಿಎ) ವರದಿಯಲ್ಲಿ ತಿಳಿಸಲಾಗಿದೆ. ವರ್ಷದ ಹಿಂದೆಯೂ (2018–19ರಲ್ಲಿ) ಈ ಕೊರತೆಯು ಶೇ 55.3ರಷ್ಟಿತ್ತು.

ಫೆಬ್ರುವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ, 2019–20ನೆ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯು ₹ 7.03 ಲಕ್ಷ ಕೋಟಿಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು.

ADVERTISEMENT

ಈ ವರ್ಷ ವಿತ್ತೀಯ ಕೊರತೆಯನ್ನು ಹಿಂದಿನ ವರ್ಷದ ಮಟ್ಟವಾದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.4ರಷ್ಟಕ್ಕೆ ಮಿತಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸರ್ಕಾರದ ವರಮಾನವು ಬಜೆಟ್‌ ಅಂದಾಜಿನ ಶೇ 7.3ರಷ್ಟಿದೆ. ವರ್ಷದ ಹಿಂದೆಯೂ ಇದು ಇದೇ ಮಟ್ಟದಲ್ಲಿ ಇತ್ತು.

ಭೂಮಿ, ಕಟ್ಟಡ ಮತ್ತು ಯಂತ್ರೋಪಕರಣಗಳಿಗೆ ಮಾಡುವ ಬಂಡವಾಳ ವೆಚ್ಚವು ಬಜೆಟ್ ಅಂದಾಜಿನ ಶೇ 14.2ರಷ್ಟಿದೆ. ವರ್ಷದ ಹಿಂದೆ ಇದು ಶೇ 21.3ರಷ್ಟಿತ್ತು. ಹಣಕಾಸು ವರ್ಷದ ಮೊದಲ ಎರಡು ತಿಂಗಳ ಒಟ್ಟಾರೆ ವೆಚ್ಚವು ₹ 5.12 ಲಕ್ಷ ಕೋಟಿಗಳಷ್ಟಾಗಿದೆ. ಇದು ಬಜೆಟ್‌ ಅಂದಾಜಿನ ಶೇ 18.4ರಷ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ಶೇ 19.4ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.