ADVERTISEMENT

ಪೆಟ್ರೋಲ್, ಡೀಸೆಲ್ ತೆರಿಗೆ ಆದಾಯ ಶೇ 300ರಷ್ಟು ಏರಿಕೆ!

ಪಿಟಿಐ
Published 22 ಮಾರ್ಚ್ 2021, 15:56 IST
Last Updated 22 ಮಾರ್ಚ್ 2021, 15:56 IST
ವಾಹನಕ್ಕೆ ಇಂಧನ ಭರ್ತಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ
ವಾಹನಕ್ಕೆ ಇಂಧನ ಭರ್ತಿ ಮಾಡುತ್ತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕದಿಂದ ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಶೇಕಡ 300ರಷ್ಟು ಹೆಚ್ಚಳ ಆಗಿದೆ.

ಸರ್ಕಾರವು ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕದಿಂದ ₹ 29,279 ಕೋಟಿ, ಡೀಸೆಲ್ ಮೇಲಿನ ಎಕ್ಸೈಸ್ ಸುಂಕದಿಂದ ₹ 42,881 ಕೋಟಿ ಮೊತ್ತವನ್ನು 2014–15ರಲ್ಲಿ ಸಂಗ್ರಹಿಸಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷ ಅದು.

ಹಾಲಿ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕದಿಂದ ಕೇಂದ್ರ ಸಂಗ್ರಹಿಸಿರುವ ಒಟ್ಟು ಮೊತ್ತ ₹ 2.94 ಲಕ್ಷ ಕೋಟಿ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ADVERTISEMENT

ಪೆಟ್ರೋಲ್, ಡೀಸೆಲ್ ಜೊತೆ ನೈಸರ್ಗಿಕ ಅನಿಲದ ಮೇಲೆ ಸಂಗ್ರಹಿಸಿದ ಎಕ್ಸೈಸ್ ಸುಂಕವನ್ನೂ ಪರಿಗಣಿಸಿದರೆ 2014–15ರಲ್ಲಿ ಕೇಂದ್ರಕ್ಕೆ ಒಟ್ಟು ₹ 74,158 ಕೋಟಿ ಆದಾಯ ಬಂದಿತ್ತು. ಈ ಆದಾಯದ ಪ್ರಮಾಣವು 2020ರ ಏಪ್ರಿಲ್‌ನಿಂದ 2021ರ ಜನವರಿ ನಡುವಿನ ಅವಧಿಯಲ್ಲಿ ₹ 2.95 ಲಕ್ಷ ಕೋಟಿಗೆ ಏರಿಕೆ ಆಗಿದೆ.

2014ರಲ್ಲಿ ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕ ಲೀಟರ್‌ಗೆ ₹ 9.48 ಆಗಿತ್ತು. ಇದು ಈಗ ₹ 32.90ಕ್ಕೆ ಹೆಚ್ಚಳವಾಗಿದೆ. 2014ರಲ್ಲಿ ಡೀಸೆಲ್‌ ಮೇಲಿನ ಎಕ್ಸೈಸ್ ಸುಂಕ ₹ 3.56 ಇದ್ದಿದ್ದು ಈಗ ₹ 31.80ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.