ADVERTISEMENT

ಸಹಕಾರ ಸಂಘಗಳ ಆಧುನೀಕರಣ: ರಾಜ್ಯಗಳ ಜೊತೆ ಕೇಂದ್ರ ಚರ್ಚೆ

ಪಿಟಿಐ
Published 8 ನವೆಂಬರ್ 2021, 15:37 IST
Last Updated 8 ನವೆಂಬರ್ 2021, 15:37 IST

ನವದೆಹಲಿ: ದೇಶದ 97 ಸಾವಿರ ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು (ಪಿಎಸಿ) ಆಧುನೀಕರಣಗೊಳಿಸುವ, ಕಂಪ್ಯೂಟರೀಕರಿಸುವ ಪ್ರಸ್ತಾವದ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆ ಸೋಮವಾರ ಸಭೆ ನಡೆಸಿದೆ.

ದೇಶದಲ್ಲಿ ಅಂದಾಜು 97,961 ಪಿಎಸಿಗಳು ಇವೆ. ಈ ಪೈಕಿ ಸುಸ್ಥಿತಿಯಲ್ಲಿ ಇರುವ ಸಂಘಗಳ ಸಂಖ್ಯೆ ಸರಿಸುಮಾರು 65 ಸಾವಿರ. ಕೇಂದ್ರ ಸಹಕಾರ ಕಾರ್ಯದರ್ಶಿ ಡಿ.ಕೆ. ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರದ ಪ್ರಸ್ತಾವದ ಕುರಿತು ಚರ್ಚಿಸಲಾಯಿತು.

26 ರಾಜ್ಯಗಳ ಪ್ರತಿನಿಧಿಗಳು ಹಾಗೂ ಏಳು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ‘ಕೇಂದ್ರದ ಪ್ರಸ್ತಾವವನ್ನು ಹಲವು ರಾಜ್ಯಗಳು ಸ್ವಾಗತಿಸಿವೆ’ ಎಂದು ಕೇಂದ್ರ ಸಹಕಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆರಂಭದಲ್ಲಿ 63 ಸಾವಿರ ಸಹಕಾರ ಸಂಘಗಳಲ್ಲಿ ಕೇಂದ್ರದ ಯೋಜನೆಯನ್ನು ಜಾರಿಗೆ ತರುವ ಉದ್ದೇಶವಿದ್ದು, ಇದಕ್ಕೆ ಅಗತ್ಯವಿರುವ ಬಜೆಟ್ ಎಷ್ಟು ಎಂಬುದನ್ನು ಅರಿಯಲು ಸಭೆಯನ್ನು ಕರೆಯಲಾಗಿತ್ತು. 2022ರಿಂದ ಈ ಯೋಜನೆಯು ಅನುಷ್ಠಾನಕ್ಕೆ ತರುವ ಉದ್ದೇಶವಿದೆ.

ಕಂ‍ಪ್ಯೂಟರೀಕರಣದ ಅಗತ್ಯದ ಬಗ್ಗೆ ಸಂಘಗಳ ಸದಸ್ಯರಿಗೆ ಹಾಗೂ ಆಡಳಿತ ಮಂಡಳಿಗಳ ಹಿರಿಯ ಸದಸ್ಯರಿಗೆ ಅರಿವು ಮೂಡಿಸಬೇಕು ಎಂದು ತೆಲಂಗಾಣ ಸರ್ಕಾರ ಹೇಳಿದೆ. ಇದು ಕೇಂದ್ರವು ಆಯೋಜಿಸಿದ್ದ ಎರಡನೆಯ ಸಭೆ. ಮೊದಲ ಸಭೆಯನ್ನು ಉತ್ತರಾಖಂಡ, ಗುಜರಾತ್ ಮತ್ತು ಕರ್ನಾಟಕ ಸರ್ಕಾರಗಳ ಜೊತೆ ಮಾತ್ರ ನಡೆಸಲಾಗಿತ್ತು.

ಮುಂದಿನ ಸಭೆಯನ್ನು ಕೇಂದ್ರವು ನಬಾರ್ಡ್‌ ಜೊತೆ ನಡೆಸಲಿದೆ. ಇದುವರೆಗೆ ಉತ್ತರಾಖಂಡ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ತಮ್ಮಲ್ಲಿನ ಸಹಕಾರ ಸಂಘಗಳನ್ನು ಪೂರ್ತಿಯಾಗಿ‍ಕಂಪ್ಯೂಟರೀಕರಿಸಿವೆ. ಕೆಲವು ರಾಜ್ಯಗಳಲ್ಲಿ ಇದು ತುಸು ಮಟ್ಟಿಗೆ ಆಗಿದೆ. ಕೇರಳವು ತನ್ನಲ್ಲಿನ ಸಹಕಾರ ಸಂಘಗಳ ಕಂಪ್ಯೂಟರೀಕರಣಕ್ಕೆ ಟೆಂಡರ್ ಆಹ್ವಾನಿಸಿದೆ.

ಕೇಂದ್ರವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಿಸುವ ಪ್ರಸ್ತಾವವನ್ನು 2017ರಲ್ಲಿ ಸಿದ್ಧಪಡಿಸಿತ್ತು. ಇದಕ್ಕೆ ₹ 1,950 ಕೋಟಿ ಬೇಕಾಗಬಹುದು ಎಂದು ಅಂದಾಜಿಸಿತ್ತು. ಆದರೆ, ಈ ಪ್ರಸ್ತಾವಕ್ಕೆ ಕೇಂದ್ರ ಸಂಪುಟದ ಸಮ್ಮತಿ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.