ADVERTISEMENT

ರಾಜ್ಯಗಳಿಗೆ ₹12 ಸಾವಿರ ಕೋಟಿ ಬಡ್ಡಿರಹಿತ ಸಾಲ ಘೋಷಿಸಿದ ಕೇಂದ್ರ

ಪಿಟಿಐ
Published 12 ಅಕ್ಟೋಬರ್ 2020, 9:52 IST
Last Updated 12 ಅಕ್ಟೋಬರ್ 2020, 9:52 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಬಂಡವಾಳ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಅವಧಿಗೆ ₹12 ಸಾವಿರ ಕೋಟಿ ಬಡ್ಡಿರಹಿತ ಸಾಲ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಮೊತ್ತದ ಪೈಕಿ ₹1,600 ಕೋಟಿ ಸಾಲವನ್ನು ಈಶಾನ್ಯ ರಾಜ್ಯಗಳಿಗೆ ಹಾಗೂ ₹900 ಕೋಟಿಯನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

₹7,500 ಕೋಟಿಯನ್ನು ಉಳಿದ ರಾಜ್ಯಗಳಿಗೆ ನೀಡಲಾಗುವುದು. ಈಗಾಗಲೇ ಘೊಷಿಸಲಾಗಿರುವ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ₹2,000 ಕೋಟಿ ನೀಡಲಾಗುವುದು ಎಂದು ಸಚಿವೆ ಹೇಳಿದರು.

ADVERTISEMENT

ಸಾಲದ ಮೊತ್ತವನ್ನು ಹೊಸದಾಗಿ ಘೋಷಣೆಯಾಗಿರುವ ಅಥವಾ ಈಗಾಗಲೇ ಜಾರಿಯಲ್ಲಿರುವ ಬಂಡವಾಳ ಯೋಜನೆಗಳಿಗೆ ವಿನಿಯೋಗಿಸಬೇಕು. ಗುತ್ತಿಗೆದಾರರ, ಪೂರೈಕೆದಾರರ ಪಾವತಿಗಾಗಿ ಸಾಲದ ಮೊತ್ತವನ್ನು ಬಳಸಬಹುದು. ಆದರೆ 2021ರ ಮಾರ್ಚ್ 31ರ ಒಳಗಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಹೆಚ್ಚುವರಿಯಾಗಿ ಕೇಂದ್ರ ಸರ್ಕಾರದಿಂದ ₹25 ಸಾವಿರ ಕೋಟಿ ಬಂಡವಾಳ ವೆಚ್ಚವನ್ನೂ ಹಣಕಾಸು ಸಚಿವೆ ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದ್ದ ₹4.13 ಲಕ್ಷ ಕೋಟಿಗೆ ಹೆಚ್ಚುವರಿಯಾಗಿ ಇದನ್ನು ಸೇರಿಸಲಾಗಿದೆ. ಈ ಮೊತ್ತವನ್ನು ರಸ್ತೆ, ರಕ್ಷಣಾ ಮೂಲಸೌಕರ್ಯ, ನೀರು ಪೂರೈಕೆ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.