ADVERTISEMENT

ಆರ್ಥಿಕತೆಗೆ ವೇಗ ನೀಡಲು ಆದಾಯ ತೆರಿಗೆ ದರ ತಗ್ಗಿಸಿ: ಸಂಜೀವ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 16:01 IST
Last Updated 3 ಆಗಸ್ಟ್ 2022, 16:01 IST

ಬೆಂಗಳೂರು: ‘ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ತಗ್ಗಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವಂತೆ’ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಸಂಜೀವ್‌ ಬಜಾಜ್‌ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಸಿಐಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಬೇಡಿಕೆ ಹೆಚ್ಚಾಗಲು ಜನರ ಕೈಯಲ್ಲಿ ಹೆಚ್ಚು ಹಣ ಇರುವುದು ಅಗತ್ಯವಾಗಿದೆ. ಹೀಗಾಗಿ ಸರ್ಕಾರವು ಆದಾಯ ತೆರಿಗೆ ದರಗಳನ್ನು ಇಳಿಕೆ ಮಾಡುವ ಬಗ್ಗೆ ಆಲೋಚಿಸಬೇಕು’ ಎಂದರು.

ADVERTISEMENT

ಭಾರತದ ಆರ್ಥಿಕ ತಳಹದಿಯು ಬಲಿಷ್ಠವಾಗಿದ್ದು, 2022–23ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರವು ಶೇ 7.4 ರಿಂದ ಶೇ 8.2ರ ಮಟ್ಟದಲ್ಲಿ ಇರಲಿದೆ ಎಂದು ಹೇಳಿದರು.

ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಅನಿಶ್ಚಿತ ಸ್ಥಿತಿ ಹಾಗೂ‌ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂದಕ್ಕೆ ಪಡೆಯುತ್ತಿರುವುದನ್ನು ಗಮನಲ್ಲಿ ಇಟ್ಟುಕೊಂಡು ಮಾತನಾಡಿದ ಅವರು, ‘ಆರ್ಥಿಕತೆಯ ಚೇತರಿಕೆಗಾಗಿ ಭಾರತವು ತನ್ನ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಿಕೊಳ್ಳುವ ಅಗತ್ಯ ಇದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.