ADVERTISEMENT

ಕಲ್ಲಿದ್ದಲು ಗಣಿ ಹರಾಜು ಸರಳ

ಜಾಗತಿಕ ಹೂಡಿಕೆ ಆಕರ್ಷಿಸುವ ಉದ್ದೇಶ: ಸುಗ್ರೀವಾಜ್ಞೆಗೆ ಸಂಪುಟ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:38 IST
Last Updated 8 ಜನವರಿ 2020, 19:38 IST
ಕಲ್ಲಿದ್ದಲು
ಕಲ್ಲಿದ್ದಲು   

ನವದೆಹಲಿ: ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಕಲ್ಲಿದ್ದಲು ಗಣಿಗಳ ಹರಾಜಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಈ ಉದ್ದೇಶಕ್ಕೆ ಕಾನೂನಿಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

‘ಕಲ್ಲಿದ್ದಲು ವಲಯದಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನ ಇದಾಗಿದೆ. ಇಂಧನ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಈ ಸುಗ್ರೀವಾಜ್ಞೆಯಿಂದಾಗಿ, ಸದ್ಯ ಕಾರ್ಯನಿರ್ವಹಿಸುತ್ತಿರುವ 46 ಕಬ್ಬಿಣ ಅದಿರು ಮತ್ತು ಇತರ ಗಣಿಗಳ ಹರಾಜು ಇದೇ ವರ್ಷದ ಮಾರ್ಚ್‌ 31ರ ಒಳಗೆ ನಡೆಸಲು ಅವಕಾಶ ದೊರೆಯಲಿದೆ. ಇದೇ ಮೊದಲ ಬಾರಿ ಕಲ್ಲಿದ್ದಲು ಗಣಿಗಳ ಬ್ಲಾಕ್‌ಗಳನ್ನು ಜಾಗತಿಕ ಟೆಂಡರ್‌ ಮೂಲಕ ಹರಾಜು ಹಾಕಲಾಗುವುದು.

‘ಈ ನಿರ್ಧಾರದಿಂದ ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಲಿಮಿಟೆಡ್‌ನ (ಸಿಐಎಲ್‌) ಏಕಸ್ವಾಮ್ಯ ಕೊನೆಗೊಳ್ಳಲಿದ್ದು, ಸ್ಪರ್ಧೆ ಹೆಚ್ಚಲಿದೆ. ಈಗಿರುವ ಗಣಿಯನ್ನು ಇತರ ಕಂಪನಿಯಿಂದ ಖರೀದಿಸಿದರೆ ಹೊಸದಾಗಿ ಗಣಿಗಾರಿಕೆ ಆರಂಭಿಸಲು ಖರೀದಿದಾರರು ಮತ್ತೆ ಪರಿಸರ ಹಾಗೂ ಅರಣ್ಯ ಇಲಾಖೆಯ ಅನುಮೋದನೆ ಪಡೆಯಬೇಕಾಗಿಲ್ಲ.

‘ಜಗತ್ತಿನಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಸಂಪತ್ತು ಹೊಂದಿರುವ ನಾಲ್ಕನೇ ರಾಷ್ಟ್ರವಾಗಿರುವ ಭಾರತವು, ಹಿಂದಿನ ವರ್ಷ 23.5 ಕೋಟಿ ಟನ್‌ ಕಲ್ಲಿದ್ದಲು ಆಮದು ಮಾಡಿಕೊಂಡಿತ್ತು. ಆದರೆ, ಇದರಲ್ಲಿನ ₹ 1.17 ಲಕ್ಷ ಕೋಟಿ ಮೌಲ್ಯದ 135 ಟನ್‌ ಕಲ್ಲಿದ್ದಲನ್ನು ದೇಶದಲ್ಲಿನ ಗಣಿಗಳಿಂದಲೇ ಪಡೆಯಬಹುದಾಗಿತ್ತು’ ಎಂದು ವಿವರಿಸಿದರು.

ಜಾಗತಿಕ ಕಂಪನಿಗಳಾದ ಗ್ಲೆನ್‌ಕೊರ್‌ ಪಿಎಲ್‌ಸಿ, ಬಿಎಚ್‌ಪಿ ಸಮೂಹ, ಆಂಗ್ಲೊ ಅಮೆರಿಕನ್‌ ಪಿಎಲ್‌ಸಿ ಮುಂತಾದವುಗಳನ್ನು ಕಲ್ಲಿದ್ದಲು ವಲಯದಲ್ಲಿ ಹೂಡಿಕೆ ಮಾಡುವಂತೆ ಆಕರ್ಷಿಸುವ ಉದ್ದೇಶವಿದೆ.

ಷೇರು ವಿಕ್ರಯಕ್ಕೆ ಒಪ್ಪಿಗೆ

ನೀಲಾಚಲ್‌ ಇಸ್ಪಾತ್‌ ನಿಗಮ ಲಿಮಿಟೆಡ್‌ನಲ್ಲಿ (ಎನ್‌ಐಎನ್‌ಎಲ್‌) ಪಾಲು ಹೊಂದಿರುವ ಆರು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಷೇರುಗಳನ್ನು ಮಾರಾಟ ಮಾಡಲು ‌ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ತಾತ್ವಿಕ ಒಪ್ಪಿಗೆ ನೀಡಿದೆ. ಎರಡು ಹಂತಗಳ ಹರಾಜಿನ ಮೂಲಕ ಷೇರು ವಿಕ್ರಯ ನಡೆಯಲಿದೆ.

***

ಜಾಗತಿಕ ಹೂಡಿಕೆದಾರರಿಗೆ ಗಣಿ ವಲಯ ಮುಕ್ತ ಗೊಳಿಸುವುದರಿಂದ ಹೂಡಿಕೆಯ ಜತೆಗೆ, ಗಣಿಗಾರಿಕೆಗೆ ವಿಶ್ವದರ್ಜೆಯ ತಂತ್ರಜ್ಞಾನ ಲಭ್ಯವಾಗಲಿದೆ

–ಪ್ರಹ್ಲಾದ್‌ ಜೋಶಿ, ಕಲ್ಲಿದ್ದಲು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.