ತೆಂಗಿನಕಾಯಿ
ತುಮಕೂರು: ದಿನದಿಂದ ದಿನಕ್ಕೆ ತೆಂಗಿನಕಾಯಿಗೆ ಬೇಡಿಕೆ ಹೆಚ್ಚುತ್ತಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ದರ ಮತ್ತಷ್ಟು ದುಬಾರಿಯಾಗಲಿದೆ ಎಂದು ವರ್ತಕರು ಹೇಳುತ್ತಾರೆ.
ತೆಂಗಿನಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗುತ್ತಿದೆ. ಸಣ್ಣ ಗಾತ್ರದ ಕಾಯಿ ₹20–₹22ಕ್ಕೆ ಮಾರಾಟವಾಗುತ್ತಿದ್ದರೆ, ಮಧ್ಯಮ ಗಾತ್ರ ₹25, ದೊಡ್ಡ ಗಾತ್ರದ ಕಾಯಿಗೆ ₹30ರ ವರೆಗೂ ಬೆಲೆ ಸಿಗುತ್ತಿದೆ. ಸಂತೆಗಳಲ್ಲಿ ಕೆ.ಜಿ ಲೆಕ್ಕದಲ್ಲೂ ಖರೀದಿಸುತ್ತಿದ್ದು, ಕೆ.ಜಿ ₹57–₹60ರ ವರೆಗೂ ಏರಿಕೆಯಾಗಿದೆ.
ಜಿಲ್ಲೆಯಲ್ಲಿ 2.24 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬರ, ರೋಗಬಾಧೆ, ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾಗಿದೆ.
2023ರಲ್ಲಿ ತೀವ್ರ ಬರದಿಂದ ರೈತರು ಮರಗಳನ್ನು ಉಳಿಸಿಕೊಳ್ಳುವುದೇ ಕಷ್ಟಕರವಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಮರಗಳು ಇನ್ನೂ ಚೇತರಿಸಿಕೊಂಡಿಲ್ಲ. ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಾಕಷ್ಟು ರೈತರು ಎಳನೀರು ಮಾರಾಟ ಮಾಡುತ್ತಿದ್ದಾರೆ. ತೆಂಗಿನ ಉಪ ಉತ್ಪನ್ನಗಳ ತಯಾರಿಕೆ ಮತ್ತು ಬಳಕೆಯೂ ಹೆಚ್ಚಾಗಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಹಿಂದಿನ ವರ್ಷಗಳಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹10 ಸಾವಿರಕ್ಕಿಂತ ಕಡಿಮೆ ಇತ್ತು. ಬೆಲೆ ಕುಸಿತದಿಂದ ಕಂಗಾಲಾದವರು ತೆಂಗಿನಮರಗಳ ಜಾಗದಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದಾರೆ. ಇಂತಹ ಹಲವು ಕಾರಣಗಳಿಂದ ತೆಂಗು ಉತ್ಪಾದನೆ ಕುಸಿಯುತ್ತಲೇ ಸಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ವ್ಯಾಪಾರಿಗಳು ಹೇಳುತ್ತಾರೆ.
ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದಲ್ಲಿ ಉಂಡೆ ಕೊಬ್ಬರಿ ಬದಲಿಗೆ ಕಾಯಿ ಪೌಡರ್ ಬಳಕೆ ಹೆಚ್ಚಾಗಿದೆ. ತಮಿಳುನಾಡಿನಲ್ಲೂ ಉತ್ಪಾದನೆ ತಗ್ಗಿದ್ದು, ಆ ರಾಜ್ಯದ ಕಾಯಿಯು ಸಂಕ್ರಾಂತಿ ನಂತರ ಮಾರುಕಟ್ಟೆಗೆ ಬರಲಿದೆ. ಇದರಿಂದಾಗಿ ಜಿಲ್ಲೆಯ ಕಾಯಿಗೆ ಬೇಡಿಕೆ ಬಂದಿದೆ ಎಂದು ವಿವರಿಸುತ್ತಾರೆ.
ಕಳೆದ ವರ್ಷ ತೆಂಗಿನ ಮರಗಳು ಚೇತರಿಕೆ ಕಾಣದಷ್ಟು ಬಿಸಿಲು ಕಾಡಿತ್ತು. ಇದನ್ನು ನೋಡಲಾಗದೆ ಹಲವು ರೈತರು ಮರಗಳನ್ನು ಕಡಿದು ಹಾಕಿ ಅಡಿಕೆ ಸಸಿ ನೆಟ್ಟಿದ್ದಾರೆವೆಂಕಟೇಶ್, ರೈತ, ಬಾಗೂರು, ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಕಡೂರು ವರದಿ (ಚಿಕ್ಕಮಗಳೂರು ಜಿಲ್ಲೆ): ಇಲ್ಲಿನ ಎಪಿಎಂಸಿ ಕಾಯಿ ಸಂತೆಯಲ್ಲಿ ಒಂದು ಸಾವಿರ ಉತ್ತಮ ಗುಣಮಟ್ಟದ ತೆಂಗಿನಕಾಯಿಗೆ ₹26 ಸಾವಿರ ದರವಿದೆ. ಮಧ್ಯಮ ಗಾತ್ರದ ಕಾಯಿಗಳಿಗೆ ₹18 ಸಾವಿರ ಹಾಗೂ ಚಿಕ್ಕ ಗಾತ್ರದ ಕಾಯಿಗಳಿಗೆ ₹12 ಸಾವಿರದಿಂದ ₹15 ಸಾವಿರ ಬೆಲೆ ಇದೆ.
ಒಂದು ಕ್ವಿಂಟಲ್ ತೆಂಗಿನಕಾಯಿ ₹4,500ರಿಂದ ₹5,500ರ ವರೆಗೆ ಮಾರಾಟವಾಗಿದೆ. ಕೆಲವು ವ್ಯಾಪಾರಿಗಳು ರೈತರ ತೋಟಕ್ಕೆ ಹೋಗಿ 1 ಸಾವಿರ ಕಾಯಿಗೆ ₹20 ಸಾವಿರದಿಂದ ₹24 ಸಾವಿರಕ್ಕೆ ಖರೀದಿಸುತ್ತಿದ್ದಾರೆ. ಸ್ಥಳೀಯವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿಗೆ ₹20ರಿಂದ ₹35 ದರವಿದೆ.
ವ್ಯಾಪಾರಿಗಳು ಖರೀದಿಸುವ ಕಾಯಿಯನ್ನು ಮುಂಬೈ, ದೆಹಲಿ, ಪುಣೆಗೆ ಕಳುಹಿಸುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತೆಂಗಿನಕಾಯಿ ಬೆಲೆ ಹೆಚ್ಚಾಗಿದ್ದು, ಲಾಭ ಸಿಕ್ಕಿದೆ ಎಂದು ರೈತರು ಹೇಳುತ್ತಾರೆ.
(ಚಾಮರಾಜನಗರ ವರದಿ) ಜಿಲ್ಲೆಯಲ್ಲಿ ಬೆಳೆಯುವ ಬಹುಪಾಲು ತೆಂಗಿನಕಾಯಿ ನೆರೆಯ ತಮಿಳುನಾಡು, ಕೇರಳ ರಾಜ್ಯ ಹಾಗೂ ಬೆಂಗಳೂರಿಗೆ ಹೆಚ್ಚಾಗಿ ಪೂರೈಕೆಯಾಗುತ್ತದೆ.
ಸದ್ಯ ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿಗೆ ₹40ರಿಂದ ₹45 ದರ ಇದೆ. ರೈತರಿಂದ ಕೆ.ಜಿಗೆ ₹57ಕ್ಕೆ ಖರೀದಿ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಜಿಲ್ಲೆಯ 12,015 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ವಾರ್ಷಿಕವಾಗಿ 13.21 ಕೋಟಿ ತೆಂಗಿನಕಾಯಿಗಳು ಉತ್ಪಾದನೆಯಾಗುತ್ತವೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
(ಚಿತ್ರದುರ್ಗ ವರದಿ): 2023ರಲ್ಲಿ ಕಾಡಿದ್ದ ಬರದಿಂದಾಗಿ ಬೆಂಡಾಗಿದ್ದ ತೆಂಗಿನ ಮರಗಳು ಈವರೆಗೂ ಪುನಶ್ಚೇತನ ಕಂಡಿಲ್ಲ.
ಮರಗಳಲ್ಲಿ ಹೊಸದಾಗಿ ಹೊಂಬಾಳೆ ಅರಳಿದರೂ ತೆಂಗಿನ ಹರಳು ಉದುರಿ ಹೋಗಿವೆ. ಇದರಿಂದಾಗಿ ಇಳುವರಿ ಕುಸಿತ ಕಂಡಿದೆ. ಹೊಸದುರ್ಗ, ಹಿರಿಯೂರು ಭಾಗದಲ್ಲಿ ವ್ಯಾಪಾರಿಗಳು ತೋಟಗಳಿಗೆ ಎಡತಾಕುತ್ತಿದ್ದಾರೆ. ಬೆಲೆಯೂ ಉತ್ತಮ ವಾಗಿದೆ. ಆದರೆ, ಮರಗಳಲ್ಲಿ ಕಾಯಿಗಳೇ ಇಲ್ಲದ ಕಾರಣ ಮಾರಾಟ ಕುಸಿದಿದೆ.
ತೀವ್ರ ಬಿಸಿಲಿನಿಂದಾಗಿ ಮರಗಳಿಗೆ ಕಪ್ಪುತಲೆ ಹುಳು ಬಾಧೆಯು ಕಾಡುತ್ತಿದೆ. ಹಲವು ಮರಗಳು ನಾಶವಾಗಿವೆ.
(ಮದ್ದೂರು/ ಮಂಡ್ಯ ವರದಿ): ತೆಂಗಿನ ಮರಗಳಿಗೆ ರೋಗ ಬಾಧೆ ಹಾಗೂ ಬರದ ಛಾಯೆಯಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದು, ಈ ಬಾರಿ 10 ವರ್ಷಗಳಲ್ಲೇ ಹೆಚ್ಚು ದುಬಾರಿಯಾಗಿದೆ. ಬೇಸಿಗೆಗೆ ಮುನ್ನವೇ ದರ ಹೆಚ್ಚಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ಜಿಲ್ಲೆಯ ಹಲವೆಡೆ ಸಂತೆಗೆ ಬರುತ್ತಿದ್ದ ತೆಂಗಿನಕಾಯಿಗಳ ಪೂರೈಕೆ ಕಡಿಮೆಯಾಗಿದೆ. ಮದ್ದೂರು ತಾಲ್ಲೂಕಿನ ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯಿರುವ 400 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ತೆಂಗಿನಕಾಯಿ ಮಾರುಕಟ್ಟೆಯಲ್ಲಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
ಬೆಂಗಳೂರು, ಮೈಸೂರು, ರಾಮನಗರ ಹಾಗೂ ಹೊರರಾಜ್ಯಗಳಾದ ತಮಿಳುನಾಡು, ಕೇರಳದಿಂದಲೂ ತೆಂಗಿನಕಾಯಿ ಖರೀದಿಸಲು ಇಲ್ಲಿಗೆ ವ್ಯಾಪಾರಿಗಳು ಬರುತ್ತಾರೆ. ಈ ಬಾರಿ ಪ್ರತಿ ಕೆ.ಜಿ ತೆಂಗಿನಕಾಯಿ ದರ ₹53 ರಿಂದ ₹55 ಇದೆ. ಒಂದು ದಪ್ಪ ತೆಂಗಿನಕಾಯಿಗೆ ಸುಮಾರು ₹30 ದರವಿದೆ. ‘ಎರಡು ವರ್ಷ ಮಳೆ ಕಡಿಮೆಯಾಗಿ ತೆಂಗಿನಮರಗಳು ಒಣಗಿದ್ದವು. ಕಪ್ಪುತಲೆ ಹುಳುವಿನ ಬಾಧೆಯಿಂದ ಇಳುವರಿ ಕುಸಿದಿರುವುದೇ ಬೆಲೆ ಏರಿಕೆಗೆ ಕಾರಣ’ ಎನ್ನುತ್ತಾರೆ ರೈತ ನಿಡಘಟ್ಟ ಪ್ರಕಾಶ್.
‘ಕಳೆದ 7–8 ತಿಂಗಳ ಅವಧಿಯಲ್ಲಿ ಮದ್ದೂರಿನ ಎಳನೀರು ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಾಗಿತ್ತು. ಮಂಡ್ಯ ಜಿಲ್ಲೆಯ ಬಹುತೇಕ ರೈತರು ಎಳನೀರು ಮಾರಿದ್ದರಿಂದ ಈಗ ತೆಂಗಿನಕಾಯಿಯ ಕೊರತೆ ಉಂಟಾಗಿದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.