ADVERTISEMENT

₹10 ಸಾವಿರ ದಾಟಿದ ಅರೆಬಿಕಾ ಪಾರ್ಚ್‌ಮೆಂಟ್: ಬೆಲೆ ಇದ್ದರೂ, ಬೆಳೆ ಇಲ್ಲದ ಸ್ಥಿತಿ

ಬ್ರೆಜಿಲ್‌, ಕೊಲಂಬಿಯಾದಲ್ಲಿ ತಗ್ಗಿದ ಉತ್ಪಾದನೆ

ಅದಿತ್ಯ ಕೆ.ಎ.
Published 4 ಮಾರ್ಚ್ 2020, 19:45 IST
Last Updated 4 ಮಾರ್ಚ್ 2020, 19:45 IST
ಕಾಫಿ
ಕಾಫಿ   

ಮಡಿಕೇರಿ: ಕಾಫಿ ದರವು ಎಂಟು ವರ್ಷಗಳ ಬಳಿಕ ₹ 10 ಸಾವಿರದ ಗಡಿ ದಾಟಿದ್ದು, ಕಾಫಿ ಬೆಳೆಗಾರರಲ್ಲಿ ಹರ್ಷ ತಂದಿದೆ.

ಜನವರಿ ಹಾಗೂ ಫೆಬ್ರುವರಿಯಲ್ಲಿ ಅರೆಬಿಕಾ ಪಾರ್ಚ್‌ಮೆಂಟ್‌ನ 50 ಕೆ.ಜಿ ಚೀಲಕ್ಕೆ ₹ 8,500ರಿಂದ ₹ 9,000 ಇದ್ದ ದರ, ದಿಢೀರ್ ಆಗಿ ₹ 10 ಸಾವಿರ ಗಡಿದಾಟಿದೆ.

ಹೆಚ್ಚಿದ ಧಾರಣೆಯಿಂದಾಗಿ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಬೆಳೆಗಾರರು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಬೆಲೆ ಕುಸಿತ, ಕಾರ್ಮಿಕರ ಕೊರತೆ, ದುಬಾರಿ ಖರ್ಚಿನ ಕಾರಣಕ್ಕೆ ತೋಟದ ನಿರ್ವಹಣೆಯನ್ನೇ ಕೈಬಿಟ್ಟಿದ್ದ ರೈತರು, ಮತ್ತೆ ತೋಟದತ್ತ ಮುಖಮಾಡಿದ್ದಾರೆ.

ADVERTISEMENT

ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಕಾಫಿ ಕೊಯ್ಲು ನಡೆದು, ಜನವರಿ ವೇಳೆಗೆ ಮಾರಾಟ ಮಾಡುತ್ತಾರೆ. ಜನವರಿಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಿದವರು ಕೈಕೈ ಹಿಸುಕಿಕೊಳ್ಳುತ್ತಿದ್ದರೆ, ದಾಸ್ತಾನು ಮಾಡಿಕೊಂಡಿದ್ದ ಬೆಳೆಗಾರರು ಇದೀಗ ಸಂತಸದಿಂದ ಕ್ಯೂರಿಂಗ್‌ಗೆ ತಂದು ಕಾಫಿ ಮಾರಾಟ ಮಾಡುತ್ತಿದ್ದಾರೆ. ವರ್ತಕರು, ಬೆಳೆಗಾರರ ಬಳಿಯೇ ತೆರಳಿ ಕ್ಯೂರಿಂಗ್‌ಗಿಂತಲೂ ಹೆಚ್ಚಿನ ದರ ನೀಡಿ ಕಾಫಿ ಖರೀದಿಸುತ್ತಿದ್ದಾರೆ.

ಎಷ್ಟಿದೆ ಧಾರಣೆ?: ಮಾರುಕಟ್ಟೆಯಲ್ಲಿ 50 ಕೆ.ಜಿ ಅರೆಬಿಕಾ ಪಾರ್ಚ್‌ಮೆಂಟ್‌ ಚೀಲ ಬುಧವಾರ ₹ 10,400ರಿಂದ ₹ 10,500ಕ್ಕೆ ಮಾರಾಟವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅರೆಬಿಕಾ ಪಾರ್ಚ್‌ಮೆಂಟ್‌ಗೆ ಸಿಕ್ಕಿರುವ ಗರಿಷ್ಠ ಬೆಲೆ ಎನ್ನುತ್ತಾರೆ ವರ್ತಕರು.

2014ರಲ್ಲೂ ಅರೆಬಿಕಾ ಕಾಫಿಗೆ ₹ 9,600ರಿಂದ ₹ 9,800 ಬೆಲೆ ಸಿಕ್ಕಿತ್ತು. ಬಳಿಕ ಧಾರಣೆಯು ₹ 6 ಸಾವಿರಕ್ಕೆ ಕುಸಿದಿತ್ತು.
ದರ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು. ಎಬಿಸಿ ಮತ್ತಿತರ ಕ್ಯೂರಿಂಗ್‌ಗಳಲ್ಲಿ ಕಾಫಿ ದಾಸ್ತಾನು ಮಾಡಿರುವ ಬೆಳೆಗಾರರು ಇನ್ನಷ್ಟು ದರ ಏರಿದ ಮೇಲೆಯೇ ಬಿಲ್‌ ಹಾಕಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ದರ ಏರಿಕೆಗೆ ಕಾರಣ:ಬ್ರೆಜಿಲ್‌ನಲ್ಲಿಗರಿಷ್ಠ ಪ್ರಮಾಣದಲ್ಲಿ ಕಾಫಿ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಬ್ರೆಜಿಲ್‌ ಹಾಗೂ ಕೊಲಂಬಿಯಾ ಸೇರಿದಂತೆ ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಫಸಲೂ ಇಲ್ಲ.

ರಾಜ್ಯದ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಹಾಗೂ ಬೇಲೂರು ತಾಲ್ಲೂಕುಗಳಲ್ಲೂ ಎರಡು ವರ್ಷ ಸುರಿದ ಭಾರಿ ಮಳೆ, ಪ್ರವಾಹದಿಂದ ಕಾಫಿ ಬೆಳೆ ನೆಲಕಚ್ಚಿತ್ತು. ಕಾಫಿ ಬೆಳೆಯುವ ಪ್ರದೇಶದಲ್ಲೂ ಭೂಕುಸಿತವಾಗಿತ್ತು. ಈ ಎಲ್ಲ ಕಾರಣಕ್ಕೆ ಉತ್ಪಾದನೆ ಕಡಿಮೆಯಾಗಿದ್ದು, ಉತ್ತಮ ಬೆಲೆ ಬಂದಿದೆ ಎಂದು ಕಾಫಿ ಬೆಳೆಗಾರರು ಹೇಳುತ್ತಾರೆ.

ಕೈಹಿಡಿದ ಬೆಲೆ; ಬೆಳೆ ಇಲ್ಲ: ಪ್ರತಿವರ್ಷವೂ ಬೆಲೆ ಇಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಿದ್ದ ರೈತರು, ಈ ವರ್ಷ ಬೆಲೆಯಿದ್ದರೂ ಬೆಳೆ ಇಲ್ಲದ ಸ್ಥಿತಿಗೆ ತಲುಪಿದ್ದಾರೆ.

‘50 ಚೀಲ ಕಾಫಿ ಬೆಳೆಯುವಲ್ಲಿ, ಬರೀ 10 ಚೀಲ ಕಾಫಿ ಉತ್ಪಾದನೆಯಾಗಿದೆ. ತೋಟಗಳಿಗೆ ನೀರು ನುಗ್ಗಿ ಗಿಡಗಳೂ ಕೊಳೆತು ಒಣಗಿವೆ. ಇನ್ನೂ ನಾಲ್ಕು ವರ್ಷ ತೋಟಗಳು ಚೇತರಿಕೆ ಕಾಣುವುದಿಲ್ಲ’ ಎಂದು ಹೇಳುತ್ತಾರೆ ಕಾಫಿ ಬೆಳೆಗಾರ ನಾಣಯ್ಯ.

**

ಶೇ 60ರಷ್ಟು ಬೆಳೆಗಾರರು ಕಾಫಿ ಮಾರಾಟ ಮಾಡಿದ್ದಾರೆ. ದಾಸ್ತಾನು ಮಾಡಿದ ಬೆಳೆಗಾರರಿಗೆ ಮಾತ್ರ ಲಾಭ ಸಿಗುತ್ತಿದೆ.
-ಅಬ್ದುಲ್‌, ಕಾಫಿ ವ್ಯಾಪಾರಿ

**

ಭಾರಿ ಮಳೆಯಿಂದ ಬೆಳೆಗಾರರು ಬದುಕನ್ನೇ ಕಳೆದುಕೊಂಡಿದ್ದರು. ಈಗ, ದರ ಏರುಗತಿಯಲ್ಲಿದ್ದು, ನೆಮ್ಮದಿಯಾಗಿದೆ.
-ಸುಭಾಷ್‌, ಕಾಫಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.