ADVERTISEMENT

ನೌಕರರ ವೇತನ ಹೆಚ್ಚಳ ಪ್ರಮಾಣ ಶೇ 7.3ರಷ್ಟಿರಲಿದೆ: ಸಮೀಕ್ಷೆ

ಪಿಟಿಐ
Published 18 ಫೆಬ್ರುವರಿ 2021, 13:24 IST
Last Updated 18 ಫೆಬ್ರುವರಿ 2021, 13:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಕಂಪನಿಗಳು ಈ ವರ್ಷ ತಮ್ಮ ಉದ್ಯೋಗಿಗಳ ವೇತನದಲ್ಲಿ ಸರಾಸರಿ ಶೇಕಡ 7.3ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆರ್ಥಿಕತೆಯು ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಕೆ ಕಾಣುತ್ತಿದ್ದು, ಉದ್ಯಮಿಗಳು ಮತ್ತು ಗ್ರಾಹಕರಲ್ಲಿನ ವಿಶ್ವಾಸವೂ ವೃದ್ಧಿಸುತ್ತಿದೆ. ಈ ಕಾರಣಗಳಿಂದಾಗಿ ಕಂಪನಿಗಳು ಈ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡಲಿವೆ ಎಂದು ಡೆಲಾಯ್ಟ್ ತೋಷೆ ತೊಮಾಟ್ಸು ಇಂಡಿಯಾ ಎಲ್‌ಎಲ್‌ಪಿ (ಡಿಟಿಟಿಐಎಲ್‌ಎಲ್‌ಪಿ) ವರದಿಯಲ್ಲಿ ಹೇಳಲಾಗಿದೆ.

ಕಂಪನಿಯು ನಡೆಸಿದ ಮೊದಲ ಹಂತದ ಸಮೀಕ್ಷೆಯ ವರದಿ ಪ್ರಕಾರ 2021ರಲ್ಲಿ ಕಂಪನಿಗಳು ಮಾಡಲಿರುವ ವೇತನ ಹೆಚ್ಚಳವು 2020ರಲ್ಲಿ ನೀಡಿದ್ದ ಶೆ 4.4ರಷ್ಟಕ್ಕಿಂತಲೂ ಜಾಸ್ತಿ ಇರಲಿದೆ. ಆದರೆ, 2019ರಲ್ಲಿ ನೀಡಿದ್ದ ಶೇ 8.6ಕ್ಕಿಂತಲೂ ಕಡಿಮೆ ಇರಲಿದೆ.

ADVERTISEMENT

ಸಮೀಕ್ಷೆಯಲ್ಲಿ ಭಾಗವಹಿಸಿರುವ ಕಂಪನಿಗಳ ಪೈಕಿ ಶೇ 92ರಷ್ಟು ಕಂಪನಿಗಳು ವೇತನ ಹೆಚ್ಚಳ ಮಾಡುವ ಒಲವು ವ್ಯಕ್ತಪಡಿಸಿವೆ. 2020ರಲ್ಲಿ ಶೇ 60ರಷ್ಟು ಕಂಪನಿಗಳು ವೇತನ ಹೆಚ್ಚಳ ಮಾಡುವುದಾಗಿ ಹೇಳಿದ್ದವು.

2020ರ ಡಿಸೆಂಬರ್‌ನಲ್ಲಿ ಈ ಸಮೀಕ್ಷೆ ನಡೆಸಿದ್ದು, ಏಳು ವಲಯಗಳು ಮತ್ತು 25 ಉಪ ವಲಯಗಳ ಒಟ್ಟಾರೆ 400 ಸಂಘ–ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಈ ವರ್ಷ ಶೇ 20ರಷ್ಟು ಕಂಪನಿಗಳು ವೇತನದಲ್ಲಿ ಎರಡಂಕಿಗಳಷ್ಟು ಏರಿಕೆ ಮಾಡುವ ಆಲೋಚನೆ ಇಟ್ಟುಕೊಂಡಿವೆ. 2020ರಲ್ಲಿ ಶೇ 12ರಷ್ಟು ಕಂಪ‍ನಿಗಳು ಮಾತ್ರವೇ ವೇತನದಲ್ಲಿ ಎರಡಂಕಿಗಳಷ್ಟು ಹೆಚ್ಚಳ ಮಾಡಿದ್ದವು.

ಮುಖ್ಯಾಂಶಗಳು

* ಜೀವ ವಿಜ್ಞಾನ, ಐ.ಟಿ. ವಲಯಗಳ ವೇತನದಲ್ಲಿ ಗರಿಷ್ಠ ಹೆಚ್ಚಳ ನಿರೀಕ್ಷೆ

* ತಯಾರಿಕೆ ಮತ್ತು ಸೇವಾ ವಲಯಗಳ ವೇತನ ಹೆಚ್ಚಳದ ಪ್ರಮಾಣ ಕಡಿಮೆ ಇರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.