ADVERTISEMENT

ರಾಜಿ ತೆರಿಗೆ: ಗ್ರಾಹಕರಿಂದಜಿಎಸ್‌ಟಿ ವಸೂಲಿಗೆ ತಡೆ

ಪಿಟಿಐ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ, ವಾರ್ಷಿಕ ವಹಿವಾಟು ಆಧರಿಸಿ ನಿರ್ದಿಷ್ಟ ಪ್ರಮಾಣದ ತೆರಿಗೆ ಪಾವತಿಸುವ ವರ್ತಕರು ಗ್ರಾಹಕರಿಂದ ತೆರಿಗೆ ವಸೂಲಿ ಮಾಡುವ ಪ್ರವೃತ್ತಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ.

ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ಆಯ್ಕೆ ಮಾಡಿಕೊಂಡ ವರ್ತಕರು ಸದ್ಯಕ್ಕೆ ಗ್ರಾಹಕರಿಂದ ಜಿಎಸ್‌ಟಿ ವಸೂಲಿ ಮಾಡಿ ಅದನ್ನು ಸರ್ಕಾರಕ್ಕೆ ಪಾವತಿಸುತ್ತಿಲ್ಲ. ‘ಗ್ರಾಹಕರ ಸ್ನೇಹಿ’ ಕ್ರಮದ ಅಂಗವಾಗಿ, ವರ್ತಕರ ಈ ಪ್ರವೃತ್ತಿಗೆ ರೆವಿನ್ಯೂ ಇಲಾಖೆಯು ಶೀಘ್ರದಲ್ಲಿಯೇ ಕಡಿವಾಣ ವಿಧಿಸಲಿದೆ.

ರಾಜಿ ತೆರಿಗೆಗೆ ಒಳಪಟ್ಟ ವರ್ತಕರು, ವಹಿವಾಟುದಾರರು ಮತ್ತು ಸೇವೆಗಳನ್ನು ಒದಗಿಸುವವರು ಬೆಲೆಪಟ್ಟಿಯಲ್ಲಿ ತಮ್ಮ ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯ ಮಾಡಲಿದೆ. ಒಂದೊಮ್ಮೆ ಈ ಕ್ರಮ ಜಾರಿಗೆ ಬಂದರೆ, ಕಂಪೋಸಿಷನ್‌ ಡೀಲರ್ಸ್‌ಗಳು ಗ್ರಾಹಕರಿಂದ ಜಿಎಸ್‌ಟಿ ವಸೂಲಿ ಮಾಡುವುದಕ್ಕೆ ನಿರ್ಬಂಧ ಬೀಳಲಿದೆ.

ADVERTISEMENT

ರಾಜಿ ತೆರಿಗೆ ಆಯ್ಕೆ ಮಾಡಿಕೊಂಡ ವಹಿವಾಟುದಾರರು ಸರಕು ಮತ್ತು ಸೇವೆಗಳ ಖರೀದಿದಾರರಿಂದ ತೆರಿಗೆ ವಸೂಲಿ ಮಾಡಲು ಅವಕಾಶವೇ ಇಲ್ಲದಿರುವುದರ ಬಗ್ಗೆ ಜನಜಾಗೃತಿ ಮೂಡಿಸಲೂ ಇಲಾಖೆಯು ಉದ್ದೇಶಿಸಿದೆ.

ರಾಜಿ ತೆರಿಗೆಯಡಿ, ವರ್ತಕರು ಮತ್ತು ಸರಕುಗಳ ತಯಾರಕರು ಸರಕುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಕೇವಲ ಶೇ 1ರಷ್ಟು ತೆರಿಗೆಯನ್ನಷ್ಟೆ ಪಾವತಿಸುತ್ತಾರೆ. ಈ ವ್ಯವಸ್ಥೆ (ರಾಜಿ ತೆರಿಗೆ) ಒಪ್ಪಿಕೊಂಡಿರದಿದ್ದರೆ ಶೇ 5, ಶೇ 12 ಅಥವಾ ಶೇ 18ರ ದರದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ಇದುವರೆಗೆ ‘ಜಿಎಸ್‌ಟಿ’ಯಡಿ 1.17 ಕೋಟಿ ವಹಿವಾಟುದಾರರು ನೋಂದಾಯಿತರಾಗಿದ್ದಾರೆ. ಇವರಲ್ಲಿ 20 ಲಕ್ಷ ವಹಿವಾಟುದಾರರು ‘ರಾಜಿ ತೆರಿಗೆ’ ಆಯ್ಕೆ ಮಾಡಿಕೊಂಡಿದ್ದಾರೆ. ಗಮನಾರ್ಹ ಸಂಖ್ಯೆಯ ‘ಕಂಪೋಸಿಷನ್‌ ಡೀಲರ್ಸ್‌’ಗಳು ಖರೀದಿದಾರರಿಂದ ಗರಿಷ್ಠ ಮಟ್ಟದ ‘ಜಿಎಸ್‌ಟಿ’ ವಸೂಲಿ ಮಾಡಿ ಅದನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆ ತಡೆಗೆ ಕ್ರಮ: ವರ್ತಕರು ಸಿದ್ಧಪಡಿಸುವ ಇನ್‌ವಾಯ್ಸ್‌ನಲ್ಲಿ, ತಾವು ರಾಜಿ ತೆರಿಗೆ ಆಯ್ಕೆ ಮಾಡಿಕೊಂಡ ವಹಿವಾಟುದಾರರಾಗಿದ್ದು, ಗ್ರಾಹಕರಿಂದ ಜಿಎಸ್‌ಟಿ ವಸೂಲಿ ಮಾಡುವುದಿಲ್ಲ ಎಂದು ನಮೂದಿಸುವುದನ್ನು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಕಡ್ಡಾಯ ಮಾಡಲು ಉದ್ದೇಶಿಸಿದೆ.

ಸಣ್ಣ ಪ್ರಮಾಣದ ವಹಿವಾಟುದಾರರ ತೆರಿಗೆ ಹೊರೆ ತಗ್ಗಿಸಲು, ರಿಟರ್ನ್‌ ಸಲ್ಲಿಕೆ ಸರಳಗೊಳಿಸಲು ‘ರಾಜಿ ತೆರಿಗೆ’ ವ್ಯವಸ್ಥೆ ಜಾರಿಗೆ ತರಲಾಗಿದೆ. ವಾರ್ಷಿಕ ವಹಿವಾಟು ₹ 1 ಕೋಟಿ ಇರುವವರು ಶೇ 1ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಏಪ್ರಿಲ್‌ 1ರಿಂದ ವಹಿವಾಟಿನ ಗರಿಷ್ಠ ಮಿತಿ ₹ 1.5 ಕೋಟಿಗೆ ಹೆಚ್ಚಿಸಲಾಗಿದೆ.

ಸೇವೆಗಳನ್ನು ಒದಗಿಸುವವರ ವಾರ್ಷಿಕ ವಹಿವಾಟು ₹50 ಲಕ್ಷದವರೆಗೆ ಇದ್ದವರೂ ‘ರಾಜಿ ತೆರಿಗೆ’ ಆಯ್ಕೆ ಮಾಡಿಕೊಳ್ಳಲು ಜಿಎಸ್‌ಟಿ ಮಂಡಳಿಯ ಹಿಂದಿನ ವಾರದ ಸಭೆಯಲ್ಲಿ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.