ADVERTISEMENT

ಆರ್ಥಿಕ ನಷ್ಟ ತಪ್ಪಿಸಲು ‘ಸಮಗ್ರ’ ವಿಮೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:30 IST
Last Updated 16 ಜುಲೈ 2019, 19:30 IST
   

ಮಳೆಗಾಲವು ತನ್ನ ಜೊತೆಗೆ ಕೆಲವು ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ನೀರಿನಿಂದ ಬರಬಹುದಾದ ಅನೇಕ ಕಾಯಿಲೆಗಳು ಮಳೆಗಾಲದ ಜೊತೆಯಲ್ಲೇ ಬಂದು ಬಿಡುತ್ತವೆ. ಕಾಯಿಲೆಗಳಷ್ಟೇ ಅಲ್ಲ ನೀವು ಸ್ವಂತ ವಾಹನ ಹೊಂದಿರುವವರಾಗಿದ್ದರೆ, ಮಳೆಯು ನಿಮ್ಮ ವಾಹನಗಳಿಗೂ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ವಿಪರೀತ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ನೀರು ವಾಹನದ ಎಂಜಿನ್‌ ಒಳಗೆ ನುಗ್ಗಿ ಎಂಜಿನ್‌ ಸೀಜ್‌ ಅಗುವ ಸಾಧ್ಯತೆ ಇದೆ. ಇತರ ಆಸ್ತಿ– ಪಾಸ್ತಿಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಸಹಜವಾಗಿ ಆರ್ಥಿಕ ನಷ್ಟ ಉಂಟಾಗುತ್ತದೆ. ಯಾವ ಸಮಸ್ಯೆ ಎದುರಾದರೂ, ನಿಶ್ಚಿಂತೆಯಿಂದ ಇರಲು ಬಯಸಿದ್ದರೆ ಸಮಗ್ರ ವಿಮೆ ಮಾಡಿಸುವುದು ಕ್ಷೇಮಕರ.

ಸಮಗ್ರ ಆರೋಗ್ಯ ವಿಮೆ: ವಾಂತಿಭೇದಿ, ಡೆಂಗಿ, ಸಾಮಾನ್ಯ ಜ್ವರ, ಟೈಫಾಯ್ಡ್‌, ಮಲೇರಿಯಾ, ಚಿಕೂನ್‌ಗುನ್ಯಾ... ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸುವ ಆರೋಗ್ಯ ಸಮಸ್ಯೆಗಳಿವು. ಇದರಲ್ಲಿ ಡೆಂಗಿಯ ಚಿಕಿತ್ಸೆ ಇತ್ತೀಚೆಗೆ ದುಬಾರಿಯಾಗುತ್ತಿದೆ. ಒಂದು ಬಾರಿ ರೋಗಿಗೆ ಪ್ಲೇಟ್‌ಲೆಟ್‌ ನೀಡಲು ಖಾಸಗಿ ಆಸ್ಪತ್ರೆಯವರು ಕನಿಷ್ಠ ₹ 10,000 ದಿಂದ ₹ 15,000 ಪಡೆಯುತ್ತಾರೆ. ಇಂಥ ರೋಗಿಯೊಬ್ಬ ಚೇತರಿಸಿ ಕೊಳ್ಳಬೇಕಾದರೆ ಕನಿಷ್ಠ ನಾಲ್ಕುಬಾರಿ ಪ್ಲೇಟ್‌ಲೆಟ್‌ಗಳನ್ನು ನೀಡಬೇಕಾಗುತ್ತದೆ. ಅಂದರೆ ಅದಕ್ಕೆ ಕನಿಷ್ಠವೆಂದರೂ ₹ 40,000 ವೆಚ್ಚವಾಗುತ್ತದೆ. ಆಸ್ಪತ್ರೆಯ ಇತರ ವೆಚ್ಚಗಳು, ಕೊಠಡಿಯ ಬಾಡಿಗೆ ಎಲ್ಲಾ ಸೇರಿದರೆ 8 ರಿಂದ 10 ದಿನಗಳ ಚಿಕಿತ್ಸೆಗೆ ಕಡಿಮೆ ಎಂದರೂ ₹ 2ಲಕ್ಷಕ್ಕೂ ಹೆಚ್ಚು ವೆಚ್ಚವಾಗುತ್ತದೆ. ನೀವು ಸಮಗ್ರವಾದ ಆರೋಗ್ಯ ವಿಮೆಯನ್ನು ಇನ್ನೂ ಮಾಡಿಸಿಲ್ಲವಾದರೆ ಕೂಡಲೇ ಅಂಥ ವಿಮೆಯೊಂದನ್ನು ಮಾಡಿಸಿಕೊಳ್ಳುವುದು ಸೂಕ್ತ.

ನೀವು ಈಗಾಗಲೇ ಒಂದು ಆರೋಗ್ಯ ವಿಮೆ ಹೊಂದಿದ್ದರೆ, ಇನ್ನೂ ಒಂದಿಷ್ಟು ಹಣ ಪಾವತಿಸಿ ‘ಡೆಂಗಿ’ ಜ್ವರಕ್ಕೂ ಚಿಕಿತ್ಸಾ ವೆಚ್ಚದ ರಕ್ಷಣೆ ಪಡೆಯಬಹುದು. ಇಂಥ ವಿಮೆಯನ್ನು ನೀಡುವ ಕೆಲವು ಸಂಸ್ಥೆಗಳು ಚಿಕಿತ್ಸೆಯ ವೆಚ್ಚವನ್ನು ಭರಿಸುವುದರ ಜೊತೆಗೆ ಚಿಕಿತ್ಸಾ ಸಮಯದಲ್ಲಿ ಆಗಿರುವ ಆದಾಯದ ನಷ್ಟವನ್ನೂ ಭರಿಸುತ್ತವೆ.

ADVERTISEMENT

ಸಮಗ್ರ ವಾಹನ ವಿಮೆ

ಮಳೆಗಾಲದಲ್ಲಿ ವಾಹನಗಳಿಗೂ ಸಮಸ್ಯೆ ಉಂಟಾಗುತ್ತವೆ. ಎಂಜಿನ್‌ಗೆ ನೀರು ನುಗ್ಗಿ ಹಾನಿ ಉಂಟಾದರೆ ಸಾಮಾನ್ಯ ವಿಮಾ ಪಾಲಿಸಿಗಳು ಅದರ ವೆಚ್ಚವನ್ನು ಭರಿಸುವುದಿಲ್ಲ. ಇಂಥ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆಯಾಗಿ ‘ಎಂಜಿನ್‌ ಪ್ರೊಟೆಕ್ಟರ್‌’ ಎಂಬ ಹೆಚ್ಚುವರಿ ವಿಮೆ ಮಾಡಿಸುವುದು ಲಾಭದಾಯಕ. ಇದು ವಾಹನದೊಳಗೆ ವಿದ್ಯುತ್‌ ಶಾರ್ಟ್‌ಸರ್ಕಿಟ್‌ ಆಗಿ ನಷ್ಟವಾದರೆ ಅದನ್ನೂ ಭರಿಸುತ್ತದೆ.

ಮಳೆಗಾಲದಲ್ಲಿ ವಾಹನದ ಕೆಲವು ಭಾಗಗಳು ಸವಕಳಿಯಾಗುವುದು, ನೀರಿನ ಸಂಪರ್ಕದಿಂದಾಗಿ ಹಾಳಾಗುವುದು ಸಾಮಾನ್ಯ. ಕೆಲವೊಮ್ಮೆ ವಾಹನ ನಡುರಸ್ತೆಯಲ್ಲಿ ಕೆಟ್ಟು ನಿಲ್ಲುವ ಸಂದರ್ಭವೂ ಇರುತ್ತದೆ. ಹೀಗೆ ಉಂಟಾಗುವ ನಷ್ಟವನ್ನು ಭರಿಸಲು ಸಹ ಹೆಚ್ಚುವರಿ ವಿಮೆಯನ್ನು ಕೆಲವು ಸಂಸ್ಥೆಗಳು ನೀಡುತ್ತವೆ. ಈಗಾಗಲೇ ಇರುವ ವಿಮೆಗೆ ಹೆಚ್ಚುವರಿಯಾಗಿ ಇಂತಹ ವಿಮೆಗಳನ್ನು ಮಾಡಿಸಿದರೆ ವಿಮಾ ಕಂತು ತುಂಬ ದುಬಾರಿಯೂ ಆಗಿರುವುದಿಲ್ಲ.

ಸಮಗ್ರ ಗೃಹ ವಿಮೆ

ಪ್ರವಾಹ ಪರಿಸ್ಥಿತಿ ಮತ್ತು ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಹಾನಿ ಉಂಟಾಗಬಹುದು. ಸಮಗ್ರ ಗೃಹ ವಿಮಾ ಪಾಲಿಸಿಯು ಹೀಗೆ ಯಾವುದೇ ರೀತಿಯಿಂದ ಆಗುವ ನಷ್ಟವನ್ನೂ ಭರಿಸಿಕೊಡುತ್ತದೆ. ಗೃಹ ವಿಮೆ ಯೋಜನೆಯು ಮನೆ ಒಳಗಿನ ವಸ್ತುಗಳಿಗೂ ಅನ್ವಯವಾಗುವಂತೆ ಇರಬೇಕು ಎಂಬುದು. ಮನೆಯೊಳಗಿನ ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳೂ ಸೇರಿದಂತೆ ಎಲ್ಲ ವನ್ನೂ ಒಳಗೊಳ್ಳುವಂತಹ ವಿಮಾ ಪಾಲಿಸಿಗಳನ್ನು ಅನೇಕ ಸಂಸ್ಥೆಗಳು ನೀಡುತ್ತವೆ.

₹ 50 ಲಕ್ಷ ಬೆಲೆಯ ಮನೆಯೊಂದರ ವಿಮೆಗೆ ವಾರ್ಷಿಕ ಸುಮಾರು ₹ 2,200 ರಿಂದ ₹ 2,600 ಕಂತು ಕಟ್ಟಬೇಕಾಗಬಹುದು. ಅದೇ ಮನೆಗೆ ಸಮಗ್ರವಾದ ವಿಮೆ (ಪೀಠೋಪಕರಣ, ಗೃಹಬಳಕೆ ವಸ್ತುಗಳೆಲ್ಲವೂ ಸೇರಿ) ಮಾಡಿಸಲು ವಾರ್ಷಿಕ ಸುಮಾರು ₹ 6,500ರಿಂದ ₹ 7,500 ಕಂತು ಬರಬಹುದು. ಇದು ಅಷ್ಟೇನೂ ದುಬಾರಿ ಎನಿಸದು.

(ಲೇಖಕ: ‘ಪಾಲಿಸಿಬಜಾರ್‌ಡಾಟ್‌ಕಾಂ’ನ ಜನರಲ್‌ ಇನ್ಶೂರೆನ್ಸ್‌ ಸಿಬಿಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.