ADVERTISEMENT

ಎಂಟು ಪ್ರಮುಖ ವಲಯಗಳ ಉತ್ಪಾದನೆ ಕುಸಿತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 20:07 IST
Last Updated 31 ಅಕ್ಟೋಬರ್ 2019, 20:07 IST

ನವದೆಹಲಿ (ಪಿಟಿಐ): ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಗಮನಾರ್ಹ ಪ್ರಮಾಣ ಎನ್ನಬಹುದಾದ ಶೇ 5.2ರಷ್ಟು ಕುಸಿತ ಕಂಡಿದೆ.

ಆರ್ಥಿಕತೆಯಲ್ಲಿನ ಮಂದ ಪ್ರಗತಿಯು ಇನ್ನಷ್ಟು ತೀವ್ರಗೊಂಡಿರುವುದನ್ನು ಇದು ಸೂಚಿಸುತ್ತದೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಎಂಟು ಮೂಲ ಸೌಕರ್ಯಗಳ ಪೈಕಿ ಏಳು ವಲಯಗಳಲ್ಲಿನ ಉತ್ಪಾದನಾ ಪ್ರಗತಿಯು ನಕಾರಾತ್ಮಕ ಬೆಳವಣಿಗೆ ಕಂಡಿದೆ. ಆಗಸ್ಟ್‌ ತಿಂಗಳಲ್ಲಿ ಶೇ 0.5ರಷ್ಟು ಕುಸಿತ ದಾಖಲಿಸಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಎಂಟೂ ವಲಯಗಳ ಉತ್ಪಾದನಾ ಹೆಚ್ಚಳವು ಶೇ 4.3ರಷ್ಟು ಏರಿಕೆ ಕಂಡಿತ್ತು.

ADVERTISEMENT

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್‌, ತೈಲಾಗಾರ ಉತ್ಪನ್ನ, ಉಕ್ಕು ಮತ್ತು ವಿದ್ಯುತ್‌ ವಲಯದಲ್ಲಿನ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಕುಸಿತ ಕಂಡಿದೆ. ರಸಗೊಬ್ಬರ ಉತ್ಪಾದನೆ ಮಾತ್ರ ಶೇ 5.4ರಷ್ಟು ಏರಿಕೆ ದಾಖಲಿಸಿದೆ.

ಈ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಪ್ರಮುಖ ಮೂಲ ಸೌಕರ್ಯಗಳ ಉತ್ಪಾದನಾ ಬೆಳವಣಿಗೆಯು ಶೇ 1.3ರಷ್ಟು ಕುಸಿತ ಕಂಡಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 5.5ರಷ್ಟು ಹೆಚ್ಚಳ ಸಾಧಿಸಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಶೇ 40.27ರಷ್ಟು ಪಾಲು ಹೊಂದಿರುವ 8 ಮೂಲ ಸೌಕರ್ಯ ವಲಯಗಳ ಉತ್ಪಾದನೆ ಕುಸಿತವು ನವೆಂಬರ್‌ ತಿಂಗಳ ಕೈಗಾರಿಕಾ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಆಗಸ್ಟ್‌ ತಿಂಗಳ ಉತ್ಪಾದನೆಯನ್ನು ಈ ಮುಂಚಿನ ಶೇ –0.5 ರಿಂದ ಶೇ 0.1ಕ್ಕೆ ಪರಿಷ್ಕರಿಸಲಾಗಿದೆ.

ವಿತ್ತೀಯ ಕೊರತೆ ಹೆಚ್ಚಳ

ಸೆಪ್ಟೆಂಬರ್‌ ತಿಂಗಳಲ್ಲಿ ವಿತ್ತೀಯ ಕೊರತೆಯು ₹ 6.52 ಲಕ್ಷ ಕೋಟಿಗಳಷ್ಟಾಗಿದ್ದು, ಇದು ಬಜೆಟ್‌ ಅಂದಾಜಿನ ಶೇ 93ರಷ್ಟಾಗಿದೆ.

ತಿಂಗಳ ಲೆಕ್ಕದಲ್ಲಿನ ವಿತ್ತೀಯ ಕೊರತೆಯು, ಹಣಕಾಸು ವರ್ಷದ ಒಟ್ಟಾರೆ ವಿತ್ತೀಯ ಕೊರತೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಲೆಕ್ಕಪತ್ರಗಳ ಮಹಾ ನಿಯಂತ್ರಕರ (ಸಿಜಿಎ) ವರದಿಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ವೆಚ್ಚ ಮತ್ತು ವರಮಾನ ನಡುವಣ ವ್ಯತ್ಯಾಸವಾಗಿರುವ ವಿತ್ತೀಯ ಕೊರತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 7.03 ಲಕ್ಷ ಕೋಟಿಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.3ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಒಟ್ಟಾರೆ ಹಣಕಾಸು ವರ್ಷದಲ್ಲಿ ₹ 19.62 ಲಕ್ಷ ಕೋಟಿಗಳಷ್ಟು ವರಮಾನ ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಒಟ್ಟಾರೆ ವೆಚ್ಚವು ₹ 27.86 ಲಕ್ಷ ಕೋಟಿಗಳಷ್ಟು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.