ADVERTISEMENT

ಕೊರೊನಾ ಪರಿಣಾಮ: ಸಾರಿಗೆ, ನಿರ್ಮಾಣ ವಲಯಗಳಲ್ಲಿ ತೀವ್ರ ನಷ್ಟ ಸಾಧ್ಯತೆ

ಪಿಟಿಐ
Published 15 ಮಾರ್ಚ್ 2020, 20:00 IST
Last Updated 15 ಮಾರ್ಚ್ 2020, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚೀನಾದಲ್ಲಿ ‘ಕೊರೊನಾ–2’ ವೈರಸ್‌ ಉಂಟುಮಾಡಿರುವ ಹಾವಳಿಯಿಂದ ಭಾರತದಲ್ಲಿನ ಕಟ್ಟಡ ನಿರ್ಮಾಣ, ಸಾರಿಗೆ, ರಾಸಾಯನಿಕ ಮತ್ತು ಯಂತ್ರೋಪಕರಣ ತಯಾರಿಕಾ ವಲಯಗಳು ತೀವ್ರ ಸ್ವರೂಪದ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಅಂದಾಜಿಸಲಾಗಿದೆ.

ವಿಶ್ವದಾದ್ಯಂತ ಈ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ತಲ್ಲಣ ಕಂಡುಬಂದಿದೆ. ಭಾರತವು ತನ್ನ ಅಗತ್ಯದ ಕಬ್ಬಿಣ ಮತ್ತು ಉಕ್ಕಿನ ಪ್ರಮಾಣದಲ್ಲಿ ಚೀನಾದಿಂದ ಶೇ 11ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಈ ವಹಿವಾಟಿನ ಮೇಲೆ ಸಾಧಾರಣ ಸ್ವರೂಪದ ಪರಿಣಾಮ ಕಂಡು ಬರಲಿದೆ. ಎಲೆಕ್ಟ್ರಿಕಲ್ ಯಂತ್ರೋಪಕರಣ, ರಾಸಾಯನಿಕಗಳು, ಪ್ಲಾಸ್ಟಿಕ್‌, ಆಪ್ಟಿಕಲ್‌ ಮತ್ತು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಲಕರಣಗಳಿಗಾಗಿ ಭಾರತ ಚೀನಾವನ್ನು ಹೆಚ್ಚಾಗಿ ಅವಲಂಬಿಸಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ ವರದಿಯಲ್ಲಿ ತಿಳಿಸಲಾಗಿದೆ.

2019ರಲ್ಲಿ ಚೀನಾದಿಂದ ₹ 35.49 ಲಕ್ಷ ಕೋಟಿ ಮೊತ್ತದ ಕಬ್ಬಿಣ, ಉಕ್ಕು ಮತ್ತು ರಾಸಾಯನಿಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.ಮಂದಗತಿಯ ಆರ್ಥಿಕ ಚಟುವಟಿಕೆಗಳು ಮತ್ತು ಬೇಡಿಕೆ ಕುಸಿತದ ಕಾರಣಕ್ಕೆ ಜಾಗತಿಕ ಆರ್ಥಿಕ ಬೆಳವಣಿಗೆ ದರ ಇನ್ನಷ್ಟು ಕುಂಠಿತಗೊಳ್ಳಲಿದೆ ಎಂದು ರೇಟಿಂಗ್‌ ಸಂಸ್ಥೆಗಳು ಅಂದಾಜಿಸಿವೆ.

ADVERTISEMENT

ಜಿಎಸ್‌ಟಿ ಮಂಡಳಿ ಸಭೆ ಚರ್ಚೆ

‘ಕೊರೊನಾ–2’ ವೈರಸ್‌ ಹಾವಳಿಯು ದೇಶಿ ಆರ್ಥಿಕತೆ ಮೇಲೆ ಬೀರಲಿರುವ ಪ್ರತಿಕೂಲ ಪರಿಣಾಮಗಳನ್ನು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ.

‘ಆರ್ಥಿಕತೆ ಮೇಲೆ ಕೊರೊನಾ ಬೀರಲಿರುವ ಪರಿಣಾಮಗಳನ್ನು ಅಂದಾಜಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕೈಗಾರಿಕೆ ಮತ್ತು ಸೇವಾ ವಲಯಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

‘ಈ ಸಾಂಕ್ರಾಮಿಕ ಪಿಡುಗು ಉದ್ಯೋಗ ನಷ್ಟ ಮತ್ತು ಸರ್ಕಾರದ ವರಮಾನ ನಷ್ಟಕ್ಕೆ ಕಾರಣವಾಗಲಿದೆ. ಇದೊಂದು ಬರೀ ಆರೋಗ್ಯ ಸಮಸ್ಯೆಯಲ್ಲ. ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನ ಗಂಡಾಂತರ ಇದಾಗಿದೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೊಡಿಯಾ ಹೇಳಿದ್ದಾರೆ.

ಇ–ಕಾಮರ್ಸ್‌ ವಹಿವಾಟು ಹೆಚ್ಚಳ

ಬೆಂಗಳೂರಿನಲ್ಲಿ ಬಾಡಿಗೆ ಟ್ಯಾಕ್ಸಿ ಬಳಕೆಗೆ ಗ್ರಾಹಕರಿಂದ ಬೇಡಿಕೆ ಕಡಿಮೆಯಾಗಿದ್ದರೂ, ಇ–ಕಾಮರ್ಸ್‌ ವಹಿವಾಟಿಗೆ ಬೇಡಿಕೆ ಹೆಚ್ಚಿದೆ.

ಗ್ರಾಹಕರು ಮನೆಯಲ್ಲಿಯೇ ಕುಳಿತು ದಿನಸಿ, ತಾಜಾ ತರಕಾರಿ, ಹಾಲಿನ ಉತ್ಪನ್ನ, ಹಣ್ಣುಗಳನ್ನು ಖರೀದಿಸಲು ಆನ್‌ಲೈನ್‌ ತಾಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸುತ್ತಿದ್ದಾರೆ.

ಬಳಕೆದಾರರು ಸರಕುಗಳ ಖರೀದಿಗೆ ಜನಸಂದಣಿ ಹೆಚ್ಚಿಗೆ ಇರುವ ಮಾರುಕಟ್ಟೆ, ಸೂಪರ್‌ ಮಾರ್ಕೆಟ್‌ಗಳಿಗೆ ತೆರಳುವುದನ್ನು ಕೈಬಿಟ್ಟಿದ್ದಾರೆ. ಜನಪ್ರಿಯ ಇ–ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಬಿಗ್‌ಬಾಸ್ಕೆಟ್‌ ಮತ್ತು ಗ್ರೋಫರ್ಸ್‌ಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಸರಕುಗ ಖರೀದಿಗೆ ಆನ್‌ಲೈನ್‌ ಬೇಡಿಕೆ ಶೇ 20 ರಿಂದ ಶೇ 30ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.