ಕೋಲ್ಕತ್ತ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಸರಾಸರಿ ಶೇ 4ರಷ್ಟು ಇರುವ ನಿರೀಕ್ಷೆ ಇದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್‌ನ ಸಂಶೋಧನಾ ವರದಿ ತಿಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ ಹಣದುಬ್ಬರ ಶೇ 4.6ರಷ್ಟಿತ್ತು.
ಭಾರತೀಯ ಹವಾಮಾನ ಇಲಾಖೆಯ ಅಂದಾಜಿನಂತೆ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಆಗಲಿದೆ. ಹೀಗಾಗಿ ಆಹಾರ ಪದಾರ್ಥಗಳ ಬೆಲೆಯು ತಗ್ಗುವ ನಿರೀಕ್ಷೆ ಇದೆ. ಸರಕುಗಳ ದರ ಇಳಿಕೆಯಿಂದ ಆಹಾರೇತರ ಪದಾರ್ಥಗಳ ಬೆಲೆಯು ಕಡಿಮೆ ಆಗಬಹುದು ಎಂದು ಕ್ರಿಸಿಲ್ ಅಂದಾಜಿಸಿದೆ.
ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇ 6.5ರಷ್ಟಾಗಬಹುದು. ಅಮೆರಿಕದ ಸುಂಕ ನೀತಿಯು ರಫ್ತುದಾರರಿಗೆ ಒತ್ತಡ ಸೃಷ್ಟಿಸಲಿದೆ. ಆದರೆ, ಹೆಚ್ಚಿನ ಮುಂಗಾರು ಮಳೆ ಮತ್ತು ರೆಪೊ ದರ ಕಡಿತದಂತಹ ಅಂಶಗಳು ಬೆಳವಣಿಗೆಗೆ ಬೆಂಬಲ ನೀಡಲಿವೆ.
2025ರ ಮೇ ವರೆಗಿನ ದಾಖಲೆಗಳ ಪ್ರಕಾರ ಬ್ಯಾಂಕ್ ನೀಡುವ ಸಾಲದ ಪ್ರಮಾಣ ಮೊದಲ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ. ಹಣದುಬ್ಬರ ಇಳಿಕೆಯಿಂದಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಮತ್ತೊಮ್ಮೆ ರೆಪೊ ದರ ಕಡಿತ ಮಾಡಬಹುದು ಎಂದು ಕ್ರಿಸಿಲ್ ಅಂದಾಜು ಮಾಡಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.