ADVERTISEMENT

ಇಂಡಿಗೊ ಪ್ರವರ್ತಕರಲ್ಲಿ ಒಡಕು

ವಿಮಾನಯಾನ ಸೇವೆ ವಿಸ್ತರಣೆ ಕುರಿತು ಭಿನ್ನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2019, 20:15 IST
Last Updated 16 ಮೇ 2019, 20:15 IST
ಇಂಡಿಗೊ ವಿಮಾನ
ಇಂಡಿಗೊ ವಿಮಾನ   

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರವರ್ತಕರಾದ ರಾಹುಲ್‌ ಭಾಟಿಯಾ ಮತ್ತು ರಾಕೇಶ್‌ ಗಂಗ್ವಾಲ್‌ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ.

ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ ಸಂಸ್ಥೆಯ ಬಿಕ್ಕಟ್ಟು ಇನ್ನೂ ಮುಂದುವರೆದಿರುವಾಗಲೇ, ಇಂಟರ್‌ಗ್ಲೋಬ್‌ ಏವಿಯೇಷನ್‌ (ಇಂಡಿಗೊ) ಪ್ರವರ್ತಕರಲ್ಲಿ ಒಡಕು ಕಂಡು ಬಂದಿದೆ.

ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣ ವಿಷಯದಲ್ಲಿ ವಿವಾದ ತಲೆದೋರಿದೆ. ಈ ಭಿನ್ನಾಭಿಪ್ರಾಯ ತೀವ್ರಗೊಂಡರೆ ದೇಶಿ ವಿಮಾನ ಯಾನ ವಲಯಕ್ಕೆ ಭಾರಿ ಹಾನಿ ಉಂಟು ಮಾಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ವಿದೇಶ ಸೇವೆ ವಿಸ್ತರಣೆಗೆ ಸಂಬಂಧಿಸಿದಂತೆ ಗಂಗ್ವಾಲ್ಸ್‌ ಅವರ ಆಕ್ರಮಣಕಾರಿ ಧೋರಣೆಯು ಭಾಟಿಯಾ ಅವರಿಗೆ ಇಷ್ಟವಾಗಿಲ್ಲ. ತಮ್ಮದೇ ಆದ ತಂಡವನ್ನು ನೇಮಿಸಿಕೊಳ್ಳುವುದರ ಮೂಲಕ ಗಂಗ್ವಾಲ್ಸ್‌ ಅವರು ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ ಎನ್ನುವುದು ಭಾಟಿಯಾ ಅವರ ಆತಂಕವಾಗಿದೆ.

ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಉಭಯತರು ಪ್ರಯತ್ನಿಸುತ್ತಿದ್ದಾರೆ. ಈ ಉದ್ದೇಶಕ್ಕೆ ಪ್ರತ್ಯೇಕ ಸಂಸ್ಥೆಯ ಸೇವೆ ಪಡೆಯಲಾಗಿದೆ.

ದೇಶಿ ವಿಮಾನಯಾನ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಆಕ್ರಮಣಕಾರಿ ಧೋರಣೆ ಅನುಸರಿಲು ಗಂಗ್ವಾಲ್‌ ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಮತ್ತು ಸಮತೋಲನದ ಹೆಜ್ಜೆ ಇಡಬೇಕು ಎನ್ನುವುದು ಭಾಟಿಯಾ ಅವರ ನಿಲುವಾಗಿದೆ. ಗಂಗ್ವಾಲ್‌ ಅವರ ಧೋರಣೆ ವಿರೋಧಿಸಿ ಪೂರ್ಣಾವಧಿ ನಿರ್ದೇಶಕ ಆದಿತ್ಯ ಘೋಷ್‌ ಅವರು ಕಳೆದ ವರ್ಷದ ಏಪ್ರಿಲ್‌ನಲ್ಲಿ ರಾಜೀನಾಮೆ ಸಲ್ಲಿಸಿದ್ದರು.

ಸಿಇಒ ಸ್ಪಷ್ಟನೆ (ಪಿಟಿಐ ವರದಿ): ಪ್ರವರ್ತಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿರುವುದರ ಹೊರತಾಗಿಯೂ ವಿಮಾನ ಯಾನ ಸಂಸ್ಥೆಯ ಮಾರುಕಟ್ಟೆ ವಿಸ್ತರಣೆ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಕ್ಕೆ ನಿರ್ದೇಶಕ ಮಂಡಳಿಯ ಸಂಪೂರ್ಣ ಬೆಂಬಲ ಇದೆ ಎಂದು ಸಂಸ್ಥೆಯಸಿಇಒ ರೊನೊಜಾಯ್‌ ದತ್ತಾ ಹೇಳಿದ್ದಾರೆ.

‘ಮಾಧ್ಯಮಗಳಲ್ಲಿ ವರದಿಯಾಗಿರುವುದು ನಿಮಗೆಲ್ಲ ಗೊತ್ತಿದೆ. ಸಂಸ್ಥೆಯ ಬೆಳವಣಿಗೆ ಕಾರ್ಯತಂತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ನಾನು ನಿಮಗೆ ಭರವಸೆ ನೀಡುವೆ’ ಎಂದು ಸಂಸ್ಥೆಯ ಸಿಬ್ಬಂದಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಪ್ರವರ್ತಕರ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯದ ಬಗ್ಗೆ ಪತ್ರದಲ್ಲಿ ನೇರವಾಗಿ ಪ್ರಸ್ತಾಪಿಸಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.