ADVERTISEMENT

ದುಬಾರಿಯಾಗುತ್ತಿದೆ ಕಚ್ಚಾ ತೈಲ: ಆರ್ಥಿಕತೆಗೆ ಮಾರಕ

ಚಾಲ್ತಿ ಖಾತೆ ಕೊರತೆ ಹೆಚ್ಚಳ * ರೂಪಾಯಿ ಮೌಲ್ಯ ಕುಸಿತ * ಪೆಟ್ರೋಲ್‌, ಡೀಸೆ‌ಲ್‌ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 4:09 IST
Last Updated 28 ಡಿಸೆಂಬರ್ 2019, 4:09 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುಗತಿಯಲ್ಲಿ ಇರುವುದು ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

ಭಾರತವು ತನ್ನ ಅಗತ್ಯದ ಶೇ 80ರಷ್ಟು ಕಚ್ಚಾ ತೈಲಕ್ಕೆ ಆಮದನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ದುಬಾರಿ ಬೆಲೆಯಿಂದ ತೈಲ ಆಮದು ವೆಚ್ಚ ಏರಿಕೆಯಾಗುತ್ತದೆ. ಇದು ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿ ಸರಕುಗಳ ಸಾಗಾಣಿಕೆ ವೆಚ್ಚ ದುಬಾರಿಗೊಳ್ಳುತ್ತದೆ. ಇದು ಹಣದುಬ್ಬರ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಈ ಎಲ್ಲ ವಿದ್ಯಮಾನಗಳು ಮಂದಗತಿ ಆರ್ಥಿಕತೆಯ ವೇಗವನ್ನು ಇನ್ನಷ್ಟು ಕುಂಠಿತಗೊಳಿಸಲಿವೆ.

ಬಡ್ಡಿ ದರ ಕಡಿತಗೊಳಿಸಿ ಆರ್ಥಿಕತೆಗೆ ಚೇತರಿಕೆ ನೀಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಚಿಂತನೆಗೂ ಈ ಬೆಳವಣಿಗೆಯು ಅಡ್ಡಿಪಡಿಸುತ್ತದೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶುಕ್ರವಾರ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತಿ ಬ್ಯಾರೆಲ್‌ಗೆ 68.07 ಡಾಲರ್‌ಗಳಷ್ಟಾಗಿದೆ. ಇದರ ಫಲವಾಗಿ ಡಾಲರ್‌ ಎದುರು ರೂಪಾಯಿ ವಿನಿಮಯ ದರ ₹ 71.35ಕ್ಕೆ ಇಳಿದಿದೆ.

ಪ್ರತಿಕೂಲ ಪರಿಣಾಮ: ಡಿಸೆಂಬರ್‌ ತಿಂಗಳಿನಿಂದೀಚೆಗೆ ಬೆಲೆಯು ಶೇ 13ರಷ್ಟು ಏರಿಕೆ ಕಂಡಿದೆ. ಈ ವಾರದಲ್ಲಿನ ಬೆಲೆ ಹೆಚ್ಚಳವು ಶೇ 3ರಷ್ಟಾಗಿದೆ. ಈ ವಿದ್ಯಮಾನವು ಭಾರತದ ಕರೆನ್ಸಿ ವಿನಿಮಯ ದರ, ಹಣದುಬ್ಬರ ಮತ್ತು ಚಾಲ್ತಿ ಖಾತೆ ಕೊರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ತೈಲದ ಬೆಲೆಯು ಶೇ 10ರಷ್ಟು ಏರಿಕೆಯಾದರೆ, ಚಾಲ್ತಿ ಖಾತೆ ಕೊರತೆಯು ಶೇ 0.40ರಷ್ಟು ಹೆಚ್ಚಳಗೊಳ್ಳುತ್ತದೆ. ರೂಪಾಯಿ ಶೇ 3 ರಿಂದ ಶೇ 4ರಷ್ಟು ಅಪಮೌಲ್ಯಗೊಳ್ಳಲಿದೆ. ಹಣದುಬ್ಬರವು ಶೇ 0.24ರಷ್ಟು ಹೆಚ್ಚಲಿದೆ.

ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಒಪ್ಪಂದ ಸಾಧ್ಯತೆ, ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸಂಘಟನೆಯು (ಒಪೆಕ್‌) ಜನವರಿಯಿಂದ ಉತ್ಪಾದನೆ ತಗ್ಗಿಸಲು ನಿರ್ಧರಿಸಿದೆ. ಇದರಿಂದಾಗಿ ತೈಲ ದರ ಏರುಮುಖವಾಗಿದೆ.

ತೈಲ ಮಾರಾಟ ಕಂಪನಿಗೆ ಲಾಭ: ತೈಲ ಬೆಲೆ ಏರಿಕೆಯಿಂದ ತೈಲೋತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನ ಹೆಚ್ಚಳಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.