ಲಂಡನ್: ಕಚ್ಚಾ ತೈಲ ಉತ್ಪಾದನೆಯನ್ನು ಆಗಸ್ಟ್ ತಿಂಗಳಲ್ಲಿ ಪ್ರತಿದಿನಕ್ಕೆ 5.48 ಲಕ್ಷ ಬ್ಯಾರೆಲ್‌ನಷ್ಟು ಹೆಚ್ಚಿಸಲಾಗುತ್ತದೆ ಎಂದು ಸೌದಿ ಅರೇಬಿಯಾ, ರಷ್ಯಾ ಮತ್ತು ‘ಒಪೆಕ್+’ ಒಕ್ಕೂಟದ ಆರು ದೇಶಗಳು ಶನಿವಾರ ತಿಳಿಸಿವೆ.
ಒಕ್ಕೂಟವು ಕಚ್ಚಾ ತೈಲ ಉತ್ಪಾದನೆಯನ್ನು ದಿನಕ್ಕೆ 4.11 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಿಸಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ ಈಗಿನ ತೀರ್ಮಾನವು ಈ ಅಂದಾಜಿಗಿಂತ ಹೆಚ್ಚಿನದಾಗಿದೆ.
‘ಜಾಗತಿಕ ಆರ್ಥಿಕ ಮುನ್ನೋಟ ಸ್ಥಿರವಾಗಿ ಇರುವುದು, ಮಾರುಕಟ್ಟೆಯ ಮೂಲಭೂತ ಅಂಶಗಳು ಸುಸ್ಥಿತಿಯಲ್ಲಿ ಇರುವುದು’ ಉತ್ಪಾದನೆ ಹೆಚ್ಚಿಸುವ ತೀರ್ಮಾನಕ್ಕೆ ಕಾರಣವಾದವು ಎಂದು ಒಕ್ಕೂಟದ ಹೇಳಿಕೆ ತಿಳಿಸಿದೆ.
12 ದೇಶಗಳ ಒಕ್ಕೂಟವಾಗಿರುವ ‘ಒಪೆಕ್+’ 2022ರಲ್ಲಿ ಕಚ್ಚಾ ತೈಲ ಉತ್ಪಾದನೆ ಕಡಿತಕ್ಕೆ ಮುಂದಾಯಿತು. ತೈಲದ ಬೆಲೆಯು ಹೆಚ್ಚಳ ಕಾಣುವಂತೆ ಮಾಡುವುದು ಅವುಗಳ ಉದ್ದೇಶ ಆಗಿತ್ತು. ಆದರೆ ನಿಲುವು ಬದಲಿಸಿಕೊಂಡ ಎಂಟು ರಾಷ್ಟ್ರಗಳು, ಮೇ ತಿಂಗಳಿನಿಂದ ಉತ್ಪಾದನೆ ಹೆಚ್ಚು ಮಾಡುವುದಾಗಿ ಘೋಷಿಸಿದ್ದವು. ಈ ಗುಂಪಿಗೆ ಸೌದಿ ಅರೇಬಿಯಾ ನಾಯಕತ್ವ ವಹಿಸಿದೆ.
ಸೌದಿ ಅರೇಬಿಯಾ, ರಷ್ಯಾ, ಯುಎಇ, ಕುವೈತ್, ಒಮಾನ್, ಇರಾಕ್, ಕಝಕಸ್ತಾನ್ ಮತ್ತು ಅಲ್ಜೀರಿಯಾ ದೇಶಗಳು ಉತ್ಪಾದನೆ ಹೆಚ್ಚು ಮಾಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.