ADVERTISEMENT

ಕ್ರಿಪ್ಟೊ ಕರೆನ್ಸಿ: ಸಿಇಒ ನಿಧನ ₹ 1,750 ಕೋಟಿ ಪಾವತಿ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 18:12 IST
Last Updated 6 ಫೆಬ್ರುವರಿ 2019, 18:12 IST

ನ್ಯೂಯಾರ್ಕ್‌: ಕೆನಡಾದ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದ ಸಿಇಒನ ಹಠಾತ್‌ ನಿಧನದಿಂದ ಸಂಸ್ಥೆಯ ಗ್ರಾಹಕರಿಗೆ ₹ 1,750 ಕೋಟಿ ಮರುಪಾವತಿಸದ ಬಿಕ್ಕಟ್ಟು ಎದುರಾಗಿದೆ.

ವಹಿವಾಟಿನ ರಹಸ್ಯ ಸಂಖ್ಯೆಯು ಸಂಸ್ಥೆಯ ಸಿಇಒ ಗೆರಾಲ್ಡ್‌ ಕೋಟನ್‌ (30) ಅವರೊಬ್ಬರಿಗೆ ಮಾತ್ರ ಗೊತ್ತಿತ್ತು. ನಿರ್ಗತಿಕ ಮಕ್ಕಳಿಗೆ ಅನಾಥಾಲಯ ಆರಂಭಿಸುವ ಉದ್ದೇಶದಿಂದ ಭಾರತಕ್ಕೆ ಭೇಟಿ ನೀಡಿದ್ದಾಗ ಡಿಸೆಂಬರ್‌ 9ರಂದು ಕಾಯಿಲೆಗೆ ತುತ್ತಾಗಿ ಹಠಾತ್ತಾಗಿ ಮೃತಪಟ್ಟಿದ್ದರು.

ಬಿಟ್‌ಕಾಯಿನ್‌, ಲೈಟ್‌ಕಾಯಿನ್‌ ಸೇರಿದಂತೆ ಇತರ ಪರ್ಯಾಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುತ್ತಿದ್ದ ಕ್ವಾಡ್ರಿಗಲ್‌ಸಿಎಕ್ಸ್‌ ಸಂಸ್ಥೆಯಲ್ಲಿ ಈ ಬಿಕ್ಕಟ್ಟು ಎದುರಾಗಿದೆ.

ADVERTISEMENT

ವಹಿವಾಟು ಸ್ಥಗಿತದ ಸಂದರ್ಭದಲ್ಲಿ ಕ್ವಾಡ್ರಿಗಲ್‌ನಲ್ಲಿ 3.63 ಲಕ್ಷ ಬಳಕೆದಾರರು ಇದ್ದರು. 1.15 ಲಕ್ಷ ಬಳಕೆದಾರರ ಖಾತೆಯಲ್ಲಿ ಕೋಟ್ಯಂತರ ಮೊತ್ತದ ಕೆನಡಾ ಮತ್ತು ಕ್ರಿಪ್ಟೊ ಕರೆನ್ಸಿಗಳಿದ್ದವು. ಸಂಸ್ಥೆಯ ಹಣಕಾಸು ಲೆಕ್ಕಪತ್ರ ಪರಿಶೀಲಿಸಿ ಮಾರಾಟ ಸಾಧ್ಯತೆ ಬಗ್ಗೆ ವರದಿ ನೀಡಲು ಅರ್ನಸ್ಟ್‌ ಆ್ಯಂಡ್‌ ಯಂಗ್‌ ಸಂಸ್ಥೆಗೆ ಕೋರ್ಟ್‌ ಸೂಚನೆ ನೀಡಿದೆ.

ತಮ್ಮ ಪತಿ ಲ್ಯಾ‍ಪ್‌ಟ್ಯಾಪ್‌ನಲ್ಲಿ ಗೂಢಲಿಪಿಯಲ್ಲಿ ವಹಿವಾಟು ನಡೆಸುತ್ತಿದ್ದರು. ಅದರ ರಹಸ್ಯ ಸಂಖ್ಯೆ ಅವರೊಬ್ಬರಿಗೆ ಮಾತ್ರ ಗೊತ್ತಿತ್ತು. ಬೇರೆ ಎಲ್ಲಿಯೂ ರಹಸ್ಯ ಸಂಖ್ಯೆ ಬರೆದಿಟ್ಟಿಲ್ಲ ಎಂದು ಗೆರಾಲ್ಡ್‌ ಅವರ ಪತ್ನಿ ತಿಳಿಸಿದ್ದಾರೆ.

ವಿಶ್ವದಾದ್ಯಂತ ಅಸ್ತಿತ್ವದಲ್ಲಿ ಇರುವ 237 ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಕ್ವಾಡ್ರಿಗಲ್‌ ಕೂಡ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.