ADVERTISEMENT

ರೂಪಾಯಿ ಮೌಲ್ಯ ಕುಸಿತ ನಿಯಂತ್ರಣಕ್ಕೆ ಶೀಘ್ರ ಆಮದು ನಿರ್ಬಂಧ: ಸುಭಾಷ್‌ಚಂದ್ರ ಗರ್ಗ್

ಕೇಂದ್ರ ನಿಸ್ಸಹಾಕವಾಗಿಲ್ಲ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ

ಪಿಟಿಐ
Published 23 ಸೆಪ್ಟೆಂಬರ್ 2018, 11:34 IST
Last Updated 23 ಸೆಪ್ಟೆಂಬರ್ 2018, 11:34 IST
ಸುಭಾಷ್‌ ಚಂದ್ರ ಗರ್ಗ್‌
ಸುಭಾಷ್‌ ಚಂದ್ರ ಗರ್ಗ್‌    

ನವದೆಹಲಿ:‘ರೂಪಾಯಿ ಮೌಲ್ಯ ಕುಸಿತ ನಿಯಂತ್ರಿಸಲು ಕೇಂದ್ರ ಸರ್ಕಾರ ನಿಸ್ಸಹಾಯಕವಾಗಿದೆ ಎಂದು ಭಾವಿಸುವ ಅಗತ್ಯ ಇಲ್ಲ. ಮೌಲ್ಯವರ್ಧನೆಯ ಕ್ರಮಗಳು ಹಂತ ಹಂತವಾಗಿ ಜಾರಿಗೊಳ್ಳುತ್ತಿವೆ’ ಎಂದುಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ ತಿಳಿಸಿದ್ದಾರೆ.

‘ರೂಪಾಯಿ ಕುಸಿತದಿಂದ ಚಾಲ್ತಿ ಖಾತೆ ಕೊರತೆ ಮೇಲಾಗುತ್ತಿರುವ ಪರಿಣಾಮಗಳನ್ನು ಸರ್ಕಾರ ಗಮನಿಸುತ್ತಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಸಭೆ ನಡೆಸಿ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಜಾರಿಯಾಗಿವೆ. ಇನ್ನೂ ಕೆಲವು ಜಾರಿ ಹಂತದಲ್ಲಿವೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಮೊದಲ ಹಂತದಲ್ಲಿ,ತಯಾರಿಕಾ ಕಂಪನಿಗಳಿಗೆ ಬಾಹ್ಯ ವಾಣಿಜ್ಯ ಸಾಲದ (ಇಸಿಬಿ) ನಿಯಮ ಸರಳಗೊಳಿಸಲಾಗಿದೆ. ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಗೆ ಇದ್ದ ನಿರ್ಬಂಧ ಸಡಿಲಿಸಲಾಗಿದೆ. ಮಸಾಲಾ ಬಾಂಡ್‌ಗಳ ಮೇಲೆ ಇದ್ದ ತೆರಿಗೆಯನ್ನೂ ಕೈಬಿಡಲಾಗಿದೆ. ಆದರೆ, ಇದರಿಂದ ನಿರೀಕ್ಷಿತ ಮಟ್ಟದ ಪರಿಣಾಮವೇನೂ ಆಗಿಲ್ಲ. ಹೀಗಾಗಿ ಎರಡನೇ ಹಂತದ ಸುಧಾರಣಾ ಕ್ರಮಗಳು ಜಾರಿಗೆ ಬರಲಿವೆ.

ADVERTISEMENT

‘ಎರಡನೇ ಹಂತದಲ್ಲಿ, ಆಮದು ನಿರ್ಬಂಧ ಜಾರಿಗೆ ಬರಲಿದೆ. ವಾಣಿಜ್ಯ ಕಾರ್ಯದರ್ಶಿನೇತೃತ್ವದ ತಂಡವುಅನಗತ್ಯ ವಸ್ತುಗಳ ಪಟ್ಟಿಯನ್ನುಅಂತಿಮಗೊಳಿಸುತ್ತಿದೆ. ಶೀಘ್ರವೇ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ. ಇದೇ ವೇಳೆ,ಯಾವೆಲ್ಲಾ ವಸ್ತುಗಳ ರಫ್ತು ಹೆಚ್ಚಿಸಲು ಸಾಧ್ಯ ಎನ್ನುವ ಪಟ್ಟಿಯೂ ಸಿದ್ಧವಾಗಿದೆ. ಈ ಮೂಲಕ ರಫ್ತು ವಹಿವಾಟು ಹೆಚ್ಚಿಸಲು ಉತ್ತೇಜನ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.