ADVERTISEMENT

ನೋಟು ಮುದ್ರಣ ಘಟಕ: ಪಿಂಚಣಿ ಹೆಚ್ಚಳಕ್ಕೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 17:51 IST
Last Updated 19 ಏಪ್ರಿಲ್ 2019, 17:51 IST
   

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುವ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟು ಮುದ್ರಣ ಘಟಕದ 1,500ಕ್ಕೂ ಹೆಚ್ಚು ಉದ್ಯೋಗಿಗಳ ಪಿಂಚಣಿ ಏರಿಕೆ ಮಾಡಬೇಕು ಎಂಬ ಕೋರಿಕೆಗೆ ಹೈಕೋರ್ಟ್‌ ಅಸ್ತು ಎಂದಿದೆ.

ಈ ಕುರಿತಂತೆ ‘ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ಪ್ರತಿಬಂಧಕಗಳ ಕಾಯ್ದೆ–1952ರ ಅಡಿಯಲ್ಲಿ ನಮ್ಮ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ನಿರ್ದೇಶಿಸಬೇಕು’ ಎಂದು ಕೋರಿದ್ದ 1,529 ಅರ್ಜಿಗಳನ್ನು ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಉದ್ಯೋಗಿಗಳ ಭವಿಷ್ಯ ನಿಧಿಗೆ ಕಂಪನಿ ತನ್ನ ಪಾಲಿನ ಕೊಡುಗೆಯನ್ನು ಇನ್ನೂ ನೀಡಿಲ್ಲ. ಆದ್ದರಿಂದ ಭವಿಷ್ಯ ನಿಧಿಯಲ್ಲಿ ವಾರಸುದಾರಿಕೆ ಇಲ್ಲದೆ ಅನಾಥವಾಗಿರುವ ₹ 32 ಸಾವಿರ ಕೋಟಿ ಹಣವನ್ನು ಹೆಚ್ಚಳದ ಬೇಡಿಕೆ ಈಡೇರಿಸಲು ಬಳಸಬಹುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ಹೆಚ್ಚಳದ ಪಿಂಚಣಿ ಮೊತ್ತವನ್ನು ಆರು ವಾರಗಳಲ್ಲಿ ಭವಿಷ್ಯ ನಿಧಿಗೆ ವರ್ಗಾಯಿಸಿ’ ಎಂದು ನೋಟು ಮುದ್ರಣ ಘಟಕಕ್ಕೆ ಕಾಲಾವಕಾಶ ನೀಡಲಾಗಿದೆ.

ಅರ್ಜಿದಾರರಲ್ಲಿ ಕೆಲವರು ಈಗಾಗಲೇ ನಿವೃತ್ತರಾಗಿದ್ದರೆ, ಉಳಿದವರು ಬೆಂಗಳೂರಿನ ಕಾರ್ಪೋರೇಟ್‌ ಕಚೇರಿ, ಮೈಸೂರು ಮತ್ತು ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಸಾಲ್‌ಬೋನಿ ನೋಟು ಮುದ್ರಣ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.