ADVERTISEMENT

ಬ್ಯಾಂಕ್‌ ಗ್ರಾಹಕರಿಂದ ದೂರು ಹೆಚ್ಚಳ: ಡಪ್ಯುಟಿ ಗವರ್ನರ್

ಪಿಟಿಐ
Published 22 ಜುಲೈ 2025, 13:45 IST
Last Updated 22 ಜುಲೈ 2025, 13:45 IST
ಆರ್‌ಬಿಐ ಲೋಗೊ –ಎಎಫ್‌ಪಿ ಚಿತ್ರ
ಆರ್‌ಬಿಐ ಲೋಗೊ –ಎಎಫ್‌ಪಿ ಚಿತ್ರ   

ಮುಂಬೈ: ಗ್ರಾಹಕರಿಂದ ಬರುತ್ತಿರುವ ದೂರುಗಳ ಸಂಖ್ಯೆಯು ಹೆಚ್ಚುತ್ತಿದ್ದರೂ ಬ್ಯಾಂಕರ್‌ಗಳಲ್ಲಿ ‘ಸಹಾನುಭೂತಿಯ ಕೊರತೆ ಇದೆ’ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ. ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಒಂದೇ ಬಗೆಯ ಇ–ಮೇಲ್ ಪ್ರತಿಕ್ರಿಯೆಗಳನ್ನು ಕಂಡು ಗ್ರಾಹಕರು ತೃಪ್ತಿಪಟ್ಟುಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾರೆ. ಬ್ಯಾಂಕರ್‌ಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದಾದರೆ ಇಂತಹ ಸಮಸ್ಯೆಗಳನ್ನು ಪರಿಹರಿಸಬೇಕಿರುವುದು ಅಗತ್ಯ ಎಂದು ಅವರು ಹೇಳಿದ್ದಾರೆ.

ಅವರು ಜುಲೈ 12ರಂದು ನಡೆದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದಾರೆ. ಅವರ ಭಾಷಣದ ಪಠ್ಯವನ್ನು ಆರ್‌ಬಿಐ ಜಾಲತಾಣದಲ್ಲಿ ಮಂಗಳವಾರ ಪ್ರಕಟಿಸಲಾಗಿದೆ.

ADVERTISEMENT

‘ಗ್ರಾಹಕರು ಡಿಜಿಟಲ್ ಮಾರ್ಗಗಳ ಮೂಲಕ ದೂರು ನೀಡುವುದು ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ... ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಸಮಸ್ಯೆ ಇರುವುದು ಉತ್ಪನ್ನ ಅಥವಾ ಸೇವೆಯಲ್ಲಿ ಅಲ್ಲ. ಸಹಾನುಭೂತಿಯ ಕೊರತೆಯೇ ನಿಜವಾದ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ತಂತ್ರಜ್ಞಾನವು ವಹಿವಾಟನ್ನು ಸಾಧ್ಯವಾಗಿಸಿಕೊಡುತ್ತದೆ. ಆದರೆ ನೀವು ಮಾತ್ರ ಸಂಬಂಧವನ್ನು ಕಟ್ಟಿಕೊಳ್ಳಬಲ್ಲಿರಿ. ನಿಮ್ಮ ಸಂಸ್ಥೆಯ ಪರವಾಗಿ ನೀವು ಮಾತ್ರ ಗ್ರಾಹಕರ ವಿಶ್ವಾಸವನ್ನು ಗಳಿಸಬಲ್ಲಿರಿ’ ಎಂದು ಅವರು ಹೇಳಿದ್ದಾರೆ. ಬ್ಯಾಂಕರ್‌ಗೂ ಆ್ಯಪ್‌ಗೂ ಇರುವ ವ್ಯತ್ಯಾಸವೇ ಇದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.