ADVERTISEMENT

ರಾಷ್ಟ್ರ ಮಟ್ಟದ ದುಂಡು ಮೇಜಿನ ಸಭೆ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 19:34 IST
Last Updated 4 ನವೆಂಬರ್ 2023, 19:34 IST
ಕೊಬ್ಬರಿ
ಕೊಬ್ಬರಿ   

ತಿಪಟೂರು (ತುಮಕೂರು): ತೆಂಗು ಬೆಳೆಗಾರರ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಮತ್ತು ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳ ಸೇರಿದಂತೆ ಒಂಬತ್ತು ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು, ತಜ್ಞರು ಭಾಗವಹಿಸಿದ್ದ ರಾಷ್ಟ್ರ ಮಟ್ಟದ ದುಂಡು ಮೇಜಿನ ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಲ್ಲೂಕಿನ ಬಿದರೆಗುಡಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ) ಹಾಗೂ ಭಾರತೀಯ ತೆಂಗು ಸಮುದಾಯದ ಸಹಯೋಗದೊಂದಿಗೆ ದುಂಡು ಮೇಜಿನ ಸಭೆ ನಡೆಯಿತು.

ತೆಂಗು ಬೆಳೆಯುವ ಕೇರಳ, ತಮಿಳುನಾಡು ರಾಜ್ಯಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಸಲ್ಲಿಸಿ ಹೋರಾಟ ರೂಪಿಸಲು ನಿರ್ಧರಿಸಲಾಯಿತು.

ADVERTISEMENT

ಕೊಬ್ಬರಿ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಬಲ ಬೆಲೆ ಹೆಚ್ಚಿಸುವುದರ ಜತೆಗೆ ರೈತರ ಬಳಿ ಇರುವ ಎಲ್ಲಾ ಕೊಬ್ಬರಿಯನ್ನು ಯಾವುದೇ ಷರತ್ತು ವಿಧಿಸದೆ ತಕ್ಷಣ ಖರೀದಿಸಬೇಕು ಎಂದು ಆಗ್ರಹಿಸಲಾಯಿತು.

ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆಯ ಬೆಲೆಯಲ್ಲಿ ಸ್ಥಿರತೆ ಕಾಪಾಡಲು ಕ್ರಮ ವಹಿಸಬೇಕು. ಈಗಾಗಲೇ ನಾಫೆಡ್ ಮೂಲಕ ಖರೀದಿಸಿ, ಸಂಗ್ರಹಿಸಿ ಇಟ್ಟುಕೊಂಡಿರುವ ಕೊಬ್ಬರಿಯನ್ನು ಗ್ರಾಹಕರಿಗೆ ತಲುಪುವಂತೆ ಮಾಡಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಜನರಿಗೆ ತಲುಪಿಸಬೇಕು ಎಂದು ಒತ್ತಾಯಿಸಲಾಯಿತು.

ಕೊಬ್ಬರಿ

ದುಂಡು ಮೇಜಿನ ಸಭೆ ಮಂಡಿಸಿದ ಬೇಡಿಕೆ ಏನು?

* ತೆಂಗು ಉತ್ಪಾದನೆಗೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಮೌಲ್ಯಮಾಪನ ಮಾಡಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು 

* ವ್ಯಾಪಾರ ನೀತಿ ಪುನರ್ ಪರಿಶೀಲಿಸಿ ಪರಿಷ್ಕರಿಸಬೇಕು. ದೇಶೀಯವಾಗಿ ಉತ್ಪಾದನೆ ಹೆಚ್ಚಳ ರಕ್ಷಣೆ ಜತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತ ಸ್ಪರ್ಧೆಗೆ ಸಹಕಾರಿಯಾಗುವಂತಹ ನೀತಿ ರೂಪಿಸಬೇಕು 

* ನ್ಯಾಯಯುತ ವ್ಯಾಪಾರ ವ್ಯವಸ್ಥೆ ಜಾರಿಯಾಗುವಂತೆ ನೋಡಿಕೊಳ್ಳಬೇಕು

  * ತೆಂಗು ಹಾಗೂ ಅದರ ಉತ್ಪನ್ನಗಳು ಜನರಿಗೆ ನ್ಯಾಯಯುತ ಬೆಲೆಯಲ್ಲಿ ಸಿಗುವಂತಾಗಬೇಕು 

*  ರೈತ ಸಂಘಟನೆ ನೇತೃತ್ವದಲ್ಲಿ ಮುಕ್ತ ವ್ಯಾಪಾರ ನಿರ್ವಹಣಾ ಘಟಕ ಆರಂಭಿಸಬೇಕು 

* ತೆಂಗು ಬೆಳೆಗಾರರಿಗೆ ಮೀಸಲಿಟ್ಟ ಸಬ್ಸಿಡಿ ದುರ್ಬಳಕೆ ತಡೆಗಟ್ಟಬೇಕು 

* ‘ಸುರಿ ವಿರೋಧಿ ಕಾಯ್ದೆ’ ಜಾರಿಯಿಂದಆಮದು ತಗ್ಗಿ ದೇಶೀಯವಾಗಿ ಕೊಬ್ಬರಿ ವಹಿವಾಟು ಚೇತರಿಸಿಕೊಳ್ಳಲಿದೆ. ರೈತರಿಗೆ ಉತ್ತಮ ಬೆಲೆ ಸಿಗಲು ಸಹಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.