ADVERTISEMENT

ಬಿಕ್ಕಟ್ಟು ಬಗೆಹರಿಸಲು ಯತ್ನ: ಡಿಎಚ್‌ಎಫ್‌ಎಲ್‌

ಪಿಟಿಐ
Published 15 ಜುಲೈ 2019, 17:10 IST
Last Updated 15 ಜುಲೈ 2019, 17:10 IST
   

ನವದೆಹಲಿ: ನಗದು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪಾಲುದಾರರು ಮತ್ತು ಸಾಲಗಾರರ ಜತೆ ಮಾತುಕತೆ ಪ್ರಗತಿಯಲ್ಲಿ ಇದೆ ಎಂದು ಗೃಹ ಸಾಲ ಮತ್ತು ಆಸ್ತಿ ಹಣಕಾಸು ಸಂಸ್ಥೆಯಾಗಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಡಿಎಚ್‌ಎಫ್‌ಎಲ್‌) ಸೋಮವಾರ ಭರವಸೆ ನೀಡಿದೆ.

2018–19ನೆ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದಲ್ಲಿ ₹ 2,223 ಕೋಟಿಗಳಷ್ಟು ನಷ್ಟಕ್ಕೆ ಗುರಿಯಾಗಿರುವ ಸಂಸ್ಥೆಯು, ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಆತಂಕ ಎದುರಾಗಿದೆ ಎಂದು ನಿ‌ನ್ನೆಯಷ್ಟೆ ಹೇಳಿಕೊಂಡಿತ್ತು.

ವರ್ಷದ ಹಿಂದೆ ಸಂಸ್ಥೆಯು ₹ 134 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿತ್ತು. ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ತನ್ನ ಸಾಲದ ಮರು ಪಾವತಿ ಮಾಡಲು ವಿಫಲಗೊಂಡಿತ್ತು. ಬಾಂಡ್‌ ಮತ್ತು ಕಮರ್ಷಿಯಲ್‌ ಪೇಪರ್ಸ್‌ಗಳ ಸಾಲ ಮರುಪಾವತಿ ಮಾಡಿರಲಿಲ್ಲ.

ADVERTISEMENT

‘ಸಾಲಗಾರರಿಗೆ ಯಾವುದೇ ನಷ್ಟ ಉಂಟಾಗದ ರೀತಿಯಲ್ಲಿ ಸಮಗ್ರ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಹಳ ದಿನಗಳಿಂದ ನಗದು ಬಿಕ್ಕಟ್ಟು ಉಂಟಾಗಿದೆ. ತೀವ್ರ ಸ್ವರೂಪದ ನಗದು ಬಿಕ್ಕಟ್ಟು ಎದುರಿಸುತ್ತಿದ್ದರೂ ಸಂಸ್ಥೆಯು ಸದೃಢವಾಗಿದೆ.

2018ರ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ₹ 41,800 ಕೋಟಿ ಮೊತ್ತವನ್ನು ಹಿಂದಿರುಗಿಸಲಾಗಿದೆ. ವಹಿವಾಟನ್ನು ಸಹಜ ಸ್ಥಿತಿಗೆ ತರಲು ಕಳೆದ 9 ತಿಂಗಳುಗಳಿಂದ ಪ್ರಯತ್ನಿಸಲಾಗುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಕಪಿಲ್‌ ವಾಧ್ವಾನ್‌ ಹೇಳಿದ್ದಾರೆ.

ಬ್ಯಾಂಕ್‌ಗಳ ಜತೆಗಿನ ಒಪ್ಪಂದದ ಅನ್ವಯ, ಪರಿಹಾರ ಸೂತ್ರವು ಅಂತಿಮ ಹಂತದಲ್ಲಿ ಇದೆ. ಇದೇ 25ರ ವೇಳೆಗೆ ಪರಿಹಾರ ಪ್ರಕ್ರಿಯೆಯ ನಿಯಮಗಳು ಅಂತಿಮಗೊಳ್ಳಲಿವೆ. ಸೆಪ್ಟೆಂಬರ್‌ 25ರ ಒಳಗೆ ಪರಿಹಾರ ಸೂತ್ರವು ಕಾರ್ಯಗತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.