ADVERTISEMENT

ಸೆಪ್ಟೆಂಬರ್‌ನಲ್ಲಿ ವಾಹನಗಳ ರಿಟೇಲ್‌ ಮಾರಾಟ ಇಳಿಕೆ

ಪಿಟಿಐ
Published 7 ಅಕ್ಟೋಬರ್ 2021, 12:51 IST
Last Updated 7 ಅಕ್ಟೋಬರ್ 2021, 12:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಹನಗಳ ರಿಟೇಲ್‌ ಮಾರಾಟವು 2020ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇಕಡ 5ರಷ್ಟು ಇಳಿಕೆ ಆಗಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಂಗಳವಾರ ತಿಳಿಸಿದೆ.

ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್‌ ಮಾರಾಟದಲ್ಲಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ. 2020ರ ಸೆಪ್ಟೆಂಬರ್‌ನಲ್ಲಿ ಒಟ್ಟು ಮಾರಾಟವು 13.68 ಲಕ್ಷ ಇತ್ತು. 2021ರ ಸೆಪ್ಟೆಂಬರ್‌ನಲ್ಲಿ 12.96 ಲಕ್ಷ ವಾಹನಗಳ ಮಾರಾಟ ಆಗಿದೆ.

ದ್ವಿಚಕ್ರ ವಾಹನ ಮಾರಾಟವು 10.33 ಲಕ್ಷದಿಂದ 9.14 ಲಕ್ಷಕ್ಕೆ, ಅಂದರೆ ಶೇ 11.54ರಷ್ಟು, ಇಳಿಕೆ ಆಗಿದೆ. ಟ್ರ್ಯಾಕ್ಟರ್‌ಗಳ ರಿಟೇಲ್‌ ಮಾರಾಟ 69,462 ರಿಂದ 52,896ಕ್ಕೆ (ಶೇಕಡ 23.85ರಷ್ಟು) ಕಡಿಮೆ ಆಗಿದೆ.

ADVERTISEMENT

ಪ್ರಯಾಣಿಕ ವಾಹನ ಮಾರಾಟ ಶೇ 16.32ರಷ್ಟು ಹೆಚ್ಚಾಗಿದೆ. ವಾಣಿಜ್ಯ ವಾಹನಗಳ ಮಾರಾಟವು ಶೇ 46.64ರಷ್ಟು, ತ್ರಿಚಕ್ರ ವಾಹನಗಳ ಮಾರಾಟ ಶೇ 50.9ರಷ್ಟು ಏರಿಕೆ ಆಗಿದೆ. ಸೆಮಿಕಂಡಕ್ಟರ್‌ ಕೊರತೆಯಿಂದಾಗಿ 150ಸಿಸಿ ವಿಭಾಗದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ವೆಂಕಟೇಶ್‌ ಗುಲಾಟಿ ಹೇಳಿದ್ದಾರೆ.

ಈ ವರ್ಷದ ಹಬ್ಬದ ಋತುವಿನಲ್ಲಿಯೂ ಸೆಮಿಕಂಡಕ್ಟರ್‌ ಕೊರತೆಯು ಪ್ರಯಾಣಿಕ ವಾಹನ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ. ವಾಹನ ವಿತರಕರ ಬಳಿಕ ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಸ್ತಾನು ಮಿತಿಯು 15ರಿಂದ 20 ದಿನಗಳಿಗೆ ಸಾಕಾಗುವಷ್ಟು ಮಾತ್ರ ಇದೆ. ಪ್ರಯಾಣಿಕ ವಾಹನಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರು ಹೊಸ ವಾಹನ ಖರೀದಿಗೆ ಕಾಯಬೇಕಾದ ಅವಧಿ ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಾಹನಗಳ ರಿಟೇಲ್‌ ಮಾರಾಟವು ಕಳೆದ ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಗೆ ಹೋಲಿಸಿದರೆ ಈ ಬಾರಿ ಶೇ 35ರಷ್ಟು ಏರಿಕೆ ಆಗಿದೆ. ಆದರೆ 2019ರ ಅವಧಿಗೆ ಹೋಲಿಸಿದರೆ ಶೇ 29ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.