ADVERTISEMENT

ಹೆಚ್ಚಿದ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ: ನೇರ ತೆರಿಗೆ ಸಂಗ್ರಹ ಹೆಚ್ಚಳ

ಪಿಟಿಐ
Published 3 ಡಿಸೆಂಬರ್ 2018, 20:01 IST
Last Updated 3 ಡಿಸೆಂಬರ್ 2018, 20:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೇರ ತೆರಿಗೆ ಸಂಗ್ರಹವು ನವೆಂಬರ್‌ 15ರವರೆಗೆ ₹ 6.63 ಲಕ್ಷ ಕೋಟಿಗಳಷ್ಟಾಗಿದ್ದು, ಇದು ಹಿಂದಿನ ವರ್ಷದ ಈ ಅವಧಿಯಲ್ಲಿನ ತೆರಿಗೆ ಸಂಗ್ರಹಕ್ಕಿಂತ ಶೇ 16.4ರಷ್ಟು ಹೆಚ್ಚಾಗಿದೆ.

2016ರಲ್ಲಿ ನಡೆದ ನೋಟು ರದ್ದತಿಯ ನಿರ್ಧಾರದಿಂದ ದೊರೆತ ವಿಶ್ವಾಸಾರ್ಹವಾದ ಮಾಹಿತಿ ಆಧರಿಸಿ ಆದಾಯ ತೆರಿಗೆ ಇಲಾಖೆಯು ತೆರಿಗೆ ತಪ್ಪಿಸುವವರ ವಿರುದ್ಧ ನಡೆಸಿದ ಶೋಧ ಮತ್ತು ದಾಳಿಯ ಕಾರ್ಯಾಚರಣೆಯು ಫಲ ನೀಡಿದೆ. ಇದು ನೋಟು ರದ್ದತಿಯ ಸಕಾರಾತ್ಮಕ ಪರಿಣಾಮವಾಗಿದೆ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ವರದಿಯಲ್ಲಿ ತಿಳಿಸಲಾಗಿದೆ.

ನೋಟು ರದ್ದತಿಯ ನಂತರ ಬ್ಯಾಂಕ್‌ ಖಾತೆಗಳಲ್ಲಿ ಹೆಚ್ಚಿನ ಠೇವಣಿ ಕಂಡು ಬಂದ ಪ್ರಕರಣಗಳಲ್ಲಿ 3 ಲಕ್ಷ ನೋಟಿಸ್‌ಗಳನ್ನು ನೀಡಲಾಗಿತ್ತು. ಇಂತಹ ಪ್ರಕರಣಗಳಲ್ಲಿ ತೆರಿಗೆದಾರರಿಂದ 2.1 ಲಕ್ಷ ರಿಟರ್ನ್ಸ್‌ಗಳು (ಶೇ 70) ಸಲ್ಲಿಕೆಯಾಗಿವೆ. ಉಳಿದ ಶೇ 30ರಷ್ಟು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

2018–19ನೆ ಹಣಕಾಸು ವರ್ಷದಲ್ಲಿ ₹ 11.5 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಈ ಗುರಿ ಸಾಧಿಸಬೇಕಾಗಿದೆ.

ರಿಟರ್ನ್ಸ್‌ ಸಲ್ಲಿಕೆ ಹೆಚ್ಚಳ: ನಾಲ್ಕು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯಲ್ಲಿ ನಿರಂತರ ಹೆಚ್ಚಳ ಕಂಡು ಬಂದಿದ್ದು, ಹಿಂದಿನ ಹಣಕಾಸು ವರ್ಷದ ವೇಳೆಗೆ ಇದು ಶೇ 81ರಷ್ಟು ಏರಿಕೆಯಾಗಿದೆ.

ತೆರಿಗೆದಾರರ ಸಂಖ್ಯೆ ಹೆಚ್ಚಿಸಲು ಇಲಾಖೆಯು ಸಮರ್ಥವಾಗಿದೆ. 2016–17ರಲ್ಲಿ 85.51 ಲಕ್ಷದಷ್ಟಿದ್ದ ಹೊಸ ಐಟಿಆರ್‌ಗಳ ಸಂಖ್ಯೆ 2016–17ರಲ್ಲಿ 1.07 ಕೋಟಿಗೆ ತಲುಪಿ, ಶೇ 25ರಷ್ಟು ಹೆಚ್ಚಳ ದಾಖಲಿಸಿತ್ತು.

2017–18ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ಹಿಂದಿನ ವರ್ಷಕ್ಕಿಂತ ಶೇ 18ರಷ್ಟು ಏರಿಕೆ ಕಂಡು ₹ 10.03 ಲಕ್ಷ ಕೋಟಿಗೆ ತಲುಪಿತ್ತು. ಏಳು ವರ್ಷಗಳಲ್ಲಿನ ಗರಿಷ್ಠ ಹೆಚ್ಚಳ ಇದಾಗಿದೆ. ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಈ ಹೆಚ್ಚಳವು ಕ್ರಮವಾಗಿ ಶೇ 6.6 ಮತ್ತು 9ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.