ADVERTISEMENT

ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ: ಸಿಬಿಡಿಟಿ

ಪಿಟಿಐ
Published 17 ನವೆಂಬರ್ 2025, 13:41 IST
Last Updated 17 ನವೆಂಬರ್ 2025, 13:41 IST
   

ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ನೇರ ತೆರಿಗೆ ಮೂಲಕ ₹25.20 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿದೆ. ಈ ಗುರಿಯನ್ನು ತಲುಪುವ ವಿಶ್ವಾಸ ಹೊಂದಲಾಗಿದೆ’ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷ ರವಿ ಅಗರ್ವಾಲ್ ಸೋಮವಾರ ಹೇಳಿದ್ದಾರೆ.

ಮರುಪಾವತಿಗೆ ಸಂಬಂಧಿಸಿದ ಕ್ಲೇಮ್‌ಗಳಲ್ಲಿ ಕೆಲವು ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಅಲ್ಲದೆ, ಯಾವುದಾದರೂ ವಿಷಯ ನಮೂದಿಸದಿದ್ದರೆ ಪರಿಷ್ಕರಿಸಿದ ಮರುಪಾವತಿ (ರೀಫಂಡ್) ವಿವರ ಸಲ್ಲಿಸುವಂತೆ ತೆರಿಗೆ ಪಾವತಿದಾರರಿಗೆ ತಿಳಿಸಲಾಗಿದೆ. ಇದಕ್ಕಾಗಿ ಮರುಪಾವತಿಯಲ್ಲಿ ವಿಳಂಬ ಆಗುತ್ತಿದೆ ಎಂದು ಹೇಳಿದ್ದಾರೆ.

ಸಣ್ಣ ಮೊತ್ತ ಹೊಂದಿರುವ ಮರುಪಾವತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಮರುಪಾವತಿಗೆ ಸಲ್ಲಿಕೆ ಆಗುತ್ತಿರುವ ಕ್ಲೇಮ್‌ಗಳಲ್ಲಿ ಹಲವು ತಪ್ಪಾದ ಮರುಪಾವತಿಗಳಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದರು.

ADVERTISEMENT

ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಬಾಕಿ ಇರುವ ಮರುಪಾವತಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ಏಪ್ರಿಲ್‌ 1ರಿಂದ ನವೆಂಬರ್ 12ರ ವರೆಗೆ ₹12.92 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 6.99ರಷ್ಟು ಹೆಚ್ಚಳ. ಮರುಪಾವತಿ ಹಂಚಿಕೆಯಲ್ಲಿ ಶೇ 18ರಷ್ಟು ಇಳಿಕೆ ಆಗಿದ್ದು, ₹2.42 ಲಕ್ಷ ಕೋಟಿ ಆಗಿದೆ ಎಂದು ಹೇಳಿದ್ದಾರೆ. 

ಮುಂದಿನ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ಆದಾಯ ತೆರಿಗೆ ಕಾಯ್ದೆ 2025ರ ಅಡಿಯಲ್ಲಿನ ಐಟಿಆರ್ ನಮೂನೆಗಳು ಮತ್ತು ನಿಯಮಗಳನ್ನು ಆದಾಯ ತೆರಿಗೆ ಇಲಾಖೆ ವರ್ಷಾಂತ್ಯ ಅಥವಾ ಜನವರಿ ವೇಳೆಗೆ ತಿಳಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.