ADVERTISEMENT

ಸಾಲ ಮರುಪಾವತಿ ಮುಂದೂಡಿಕೆ ವಿಸ್ತರಣೆ ಬೆಡ: ಆರ್‌ಬಿಐಗೆ ಎಚ್‌ಡಿಎಫ್‌ಸಿ

ಪಿಟಿಐ
Published 27 ಜುಲೈ 2020, 16:02 IST
Last Updated 27 ಜುಲೈ 2020, 16:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೆಲವು ಕಂಪನಿಗಳು ಅವಶ್ಯಕತೆ ಇಲ್ಲದಿದ್ದರೂ ಸಾಲ ಮರುಪಾವತಿ ಮುಂದೂಡಿಕೆ ಯೋಜನೆಯ ಲಾಭ ಪಡೆಯುತ್ತಿವೆ. ಹೀಗಾಗಿ ಅದನ್ನು ಮತ್ತೆ ವಿಸ್ತರಿಸಬಾರದು’ ಎಂದು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಅಧ್ಯಕ್ಷ ದೀಪಕ್‌ ಪಾರೇಖ್‌ ಅವರು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರಿಗೆ ಮನವಿ ಮಾಡಿದ್ದಾರೆ.

‘ಈ ಯೋಜನೆಯು ಹಣಕಾಸು ವಲಯ, ಅದರಲ್ಲಿಯೂ ಮುಖ್ಯವಾಗಿ ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ಅವರು ಹೇಳಿದ್ದಾರೆ. ಆರ್‌ಬಿಐ ನಿರ್ದೇಶನದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಆಗಸ್ಟ್‌ 31ರವರೆಗೆ (ಆರು ತಿಂಗಳು) ಸಾಲ ಮರುಪಾವತಿ ಅವಧಿಯನ್ನು ಮುಂದೂಡಿವೆ.

ಕೋವಿಡ್‌–19 ಪರಿಣಾಮದಿಂದ ಉದ್ಯಮಗಳು ಹೊರಬಂದಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗಿದೆ. ಹೀಗಾಗಿ ಯೋಜನೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸುವಂತೆ ಬೇಡಿಕೆ ಬರುತ್ತಿದೆ.

ADVERTISEMENT

ಆರ್‌ಬಿಐ ಗವರ್ನರ್‌ ಅವರೊಂದಿಗೆ ಸಿಐಐ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾರೇಖ್‌, ‘ಸಾಮರ್ಥ್ಯ ಇದ್ದರೂ ಸಾಲದ ಕಂತು ಮರುಪಾವತಿಸದೇ ಇರುವವರನ್ನು ನೋಡುತ್ತಿದ್ದೇವೆ. ಹೀಗಾಗಿ ಯೋಜನೆಯನ್ನು ಮುಂದುವರಿಸಬೇಡಿ’ ಎಂದು ಮನವಿ ಮಾಡಿದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಗವರ್ನರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.