ADVERTISEMENT

ಇಕಾಮ್ ಎಕ್ಸ್‌ಪ್ರೆಸ್‌: 30 ಸಾವಿರ ನೇಮಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 5:22 IST
Last Updated 16 ಸೆಪ್ಟೆಂಬರ್ 2020, 5:22 IST
ಇಕಾಮ್‌ ಎಕ್ಸ್‌ಪ್ರೆಸ್‌ನ ಸರಕು ಪೂರೈಕೆ ಸಿಬ್ಬಂದಿ
ಇಕಾಮ್‌ ಎಕ್ಸ್‌ಪ್ರೆಸ್‌ನ ಸರಕು ಪೂರೈಕೆ ಸಿಬ್ಬಂದಿ   

ಬೆಂಗಳೂರು: ಇ-ಕಾಮರ್ಸ್ ಉದ್ಯಮದಲ್ಲಿ ಸರಕು ಸಾಗಾಣಿಕೆ ಸೇವೆ ಒದಗಿಸುತ್ತಿರುವ ಇಕಾಮ್ ಎಕ್ಸ್‌ಪ್ರೆಸ್, ತನ್ನ ವಿವಿಧ ಹಂತದ ಕಾರ್ಯಾಚರಣೆಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 30,000 ಕ್ಕೂ ಹೆಚ್ಚು ಹೊಸ ಅರೆಕಾಲಿಕ ಉದ್ಯೋಗ ಅವಕಾಶಗಳನ್ನು ಒದಗಿಸುವುದಾಗಿ ತಿಳಿಸಿದೆ.

ಕೋವಿಡ್‌ ಪಿಡುಗಿನ ಕಾರಣಕ್ಕೆ ಮನೆ ಮನೆಗೆ ಸರಕುಗಳ ಪೂರೈಕೆಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಆನ್‍ಲೈನ್ ವಹಿವಾಟಿನಲ್ಲಿ ಏರಿಕೆಯಾಗಿದೆ. ಇದಕ್ಕೆ ತಕ್ಕಂತೆ ಕಂಪನಿಯ ವಹಿವಾಟು ಕೂಡ ಹೆಚ್ಚುತ್ತಿದೆ. ಮುಂಬರುವ ಹಬ್ಬದ ದಿನಗಳಲ್ಲಿ ಈ ಅರೆಕಾಲಿಕ ಹೆಚ್ಚಿನ ನೇಮಕಾತಿಗಳಲ್ಲಿ ಸರಕು ಪೂರೈಸುವವರು, ಸರಕು ವಿಂಗಡಣೆ ಕೇಂದ್ರ ಮತ್ತು ಉಗ್ರಾಣಗಳ ನಿರ್ವಹಣೆಯ ಸಿಬ್ಬಂದಿಗೆ ಆದ್ಯತೆ ಇರಲಿದೆ.

’ಹಬ್ಬದ ಸಂದರ್ಭಗಳಲ್ಲಿನ ಗ್ರಾಹಕರ ಹೆಚ್ಚುವರಿ ಬೇಡಿಕೆಗೆ ಅನುಗುಣವಾಗಿ ಸರಕುಗಳ ನಿರ್ವಹಣೆ ಮತ್ತು ವಿತರಣೆ ಕ್ಷೇತ್ರದಲ್ಲಿ ತಾತ್ಪೂರ್ತಿಕ ನೆಲೆಯಲ್ಲಿ 30 ಸಾವಿರ ಜನರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ. ಹಬ್ಬಗಳು ಮುಗಿದ ನಂತರವೂ ಇವರಲ್ಲಿ ಅನೇಕರು ಕಾಯಂ ಉದ್ಯೋಗಿಗಳಾಗುವ ಸಾಧ್ಯತೆ ಇದೆ‘ ಎಂದು ಕಂಪನಿಯ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದ ಮುಖ್ಯಸ್ಥ ಸೌರಭ್‌ ಡಿ. ಅವರು ಹೇಳಿದ್ದಾರೆ.

ADVERTISEMENT

ಗ್ರಾಹಕರ ಬೇಡಿಕೆಗೆ ಅಮೆಜಾನ್‌ ಸ್ಪಂದನ: ಮುಂಬರುವ ಹಬ್ಬದ ದಿನಗಳಲ್ಲಿ ಗ್ರಾಹಕರ ಹೆಚ್ಚುವರಿ ಬೇಡಿಕೆ ಈಡೇರಿಸಲು ಸಾವಿರಾರು ಹೆಚ್ಚುವರಿ ಅರೆಕಾಲಿಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ಇ–ಕಾಮರ್ಸ ಕಂಪನಿ ಅಮೆಜಾನ್‌ ಇಂಡಿಯಾ ತಿಳಿಸಿದೆ.

ಮೇ ತಿಂಗಳಲ್ಲಿ ಕಂಪನಿಯು ತಾತ್ಪೂರ್ತಿಕ ನೆಲೆಯಲ್ಲಿ 70 ಸಾವಿರದಷ್ಟು ಅರೆಕಾಲಿಕ ಉದ್ಯೋಗಗಳನ್ನು ಒದಗಿಸಿತ್ತು. ಗ್ರಾಹಕರು ತಮ್ಮೆಲ್ಲ ಅಗತ್ಯಗಳನ್ನು ಸುರಕ್ಷಿತವಾಗಿ ಪೂರೈಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.